ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನಾಡಿನಲ್ಲಿರರುವ ಅನೇಕ ಮಠಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಜೊತೆಗೆ ಶಿಕ್ಷಣ, ದಾಸೋಹಕ್ಕೆ ಕೊಡುಗೆ ನೀಡಿವೆ. ಈ ಮೂಲಕ ಮಠಗಳ ಕೊಡುಗೆ ಮರೆಯುವಂತಿಲ್ಲ ಎಂದು ವಿಜಯಪುರದ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ.ವಿ.ಡಿ.ಐಹೊಳ್ಳಿ ಹೇಳಿದರು.ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶಿವಾನುಭವ ಸವಿನೆನಪು, ಲಿಂ.ಶಾಂತಾಬಾಯಿ ಮೇಟಿ, ಲಿಂ.ಷಣ್ಮುಖಪ್ಪ ಶೀಲವಂತ, ಲಿಂ.ಮನೋಹರ ದಂಡಾವತಿ ಸ್ಮರಣಾರ್ಥ ಸೋಮವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಠಗಳ ಪರಿಕಲ್ಪನೆ ಕುರಿತು ಮಾತನಾಡಿದ ಅವರು, ನಾಡಿನಲ್ಲಿರುವ ಮಠಗಳು ಸಾಹಿತ್ಯವನ್ನು ಬೆಳೆಸುವ ಮೂಲಕ ಸಾಂಸ್ಕ್ರತಿಕ ಜೀವನ ಸುಂದರಗೊಳಿಸುತ್ತವೆ. ಮಠಗಳು ಒಳ್ಳೆಯ ಕಾರ್ಯ ಮಾಡುತ್ತವೆ. ಶಿಕ್ಷಣ ಪ್ರಸಾರದಲ್ಲಿ ಮೊದಲಿನಿಂದಲೂ ಸೇವೆ ಸಲ್ಲಿಸುತ್ತಿವೆ. ಇಂದು ಕೆಲ ಮಠಗಳು ದೇಶ-ವಿದೇಶದಲ್ಲಿಯೂ ಸೇವೆ ಸಲ್ಲಿಸುತ್ತಿರುವುದನ್ನು ಕಾಣುತ್ತೇವೆ ಎಂದರು. ರುದ್ರಾಕ್ಷಿಮಠವು 1926 ರಲ್ಲಿ ಡಾ.ಫ.ಗು.ಹಳಕಟ್ಟಿ ಅವರು ಆರಂಭಿಸಿದ್ದ ಶಿವಾನುಭವ ಪತ್ರಿಕೆಯ ಎಲ್ಲ ಪ್ರತಿಗಳನ್ನು ಬೈಂಡ್ ಮಾಡಿ ಸಂರಕ್ಷಿಸಿದ ಫಲವಾಗಿ ವಿಜಯಪುರದಲ್ಲಿ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಆರಂಭಿಸಿ ಈ ಕೇಂದ್ರದ ಮೂಲಕ ಈ ಎಲ್ಲ ಪತ್ರಿಕೆಗಳನ್ನು ಪುನರ್ ಮುದ್ರಣ ಮಾಡಲು ಸಾಧ್ಯವಾಯಿತು. ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ನೀಡುವಲ್ಲಿ ಮಠಗಳ ಕೊಡುಗೆ ಮರೆಯುವಂತಿಲ್ಲ. 4 ಸಾವಿರ ಮಠಗಳಿವೆ. ಮಠಗಳು ನಡೆ-ನುಡಿಗಳಲ್ಲಿ ಒಂದಾಗಿ ಒಳ್ಳೆಯ ರೀತಿಯಲ್ಲಿ ಜನರನ್ನು ನಡೆಯುವಂತೆ ಮಾಡುವಲ್ಲಿ ಪಾತ್ರ ವಹಿಸುತ್ತವೆ. ಶ್ರೀಮಠಗಳು ಜನರಿಗೆ ಅಧ್ಯಾತ್ಮ ನೀಡುವ ಮೂಲಕ ನೆಮ್ಮದಿ ನೀಡುವ ತಾಣಗಳಾಗಿವೆ ಎಂದರು.ಬಸವ ವಿಜ್ಞಾನ ಮತ್ತು ವಾಣಿಜ್ಯ ಪಪೂ ಕಾಲೇಜಿನ ಪ್ರಾಚಾರ್ಯೆ ಉಷಾಕಿರಣ.ಎಂ ಅವರು ವಚನಕಾರ ದಂಪತಿಗಳು ಕುರಿತು ಮಾತನಾಡಿ, ಶರಣರ ಸನ್ಮಾರ್ಗದಲ್ಲಿ ನಡೆಯುವುದೇ ಒಂದು ಪುಣ್ಯದ ಕಾರ್ಯ. 12ನೇ ಶತಮಾನದಲ್ಲಿದ್ದ ಶರಣ ದಂಪತಿ ದಾಂಪತ್ಯ ಜೀವನ ಮಾದರಿಯಾಗಿದೆ. ಅವರ ಪ್ರಾಮಾಣಿಕತೆ, ಆತ್ಮತೃಪ್ತಿ, ಸಮನ್ವಯತೆ, ಕಾಯಕ,ದಾಸೋಹ ಪ್ರವೃತಿಯನ್ನು ಇಂದಿನ ದಂಪತಿ ಅಳವಡಿಸಿಕೊಂಡರೇ ಸುಂದರವಾದ ಸಂಸಾರ ನಿಭಾಯಿಸಬಹುದು. ಶರಣ ದಂಪತಿ ಆದರ್ಶವನ್ನು ಮೈಗೂಡಿಸಿಕೊಂಡರೇ ದಾಂಪತ್ಯ ಜೀವನದಲ್ಲಿ ಸಾಕಷ್ಟು ಸುಧಾರಣೆಯಾಗಲು ಸಾಧ್ಯ ಎಂದರು.
ಇಂದು ಅಧ್ಯಾತ್ಮ, ಸಾತ್ವಿಕ ಜೀವನ ಕಡಿಮೆಯಾಗುತ್ತಿರುವುದು ವಿಷಾದನೀಯ. ಸಮಾಜದಲ್ಲಿ ಮೋಸ, ವಂಚನೆ, ಸುಳ್ಳು ಹೆಚ್ಚಾಗುತ್ತಿರುವುದು ಸಾಕಷ್ಟು ಸವಾಲಾಗಿ ಪರಿಣಮಿಸುತ್ತಿರುವುದನ್ನು ನೋಡುತ್ತೇವೆ. ಇಂತಹವುಗಳ ಕಡಿಮೆಯಾಗಲು ಶರಣರ ತತ್ವಗಳು ಖಂಡಿತ ಸಹಾಯವಾಗಿವೆ ಎಂದರು.ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನಲ್ಲಿ 1800 ಮಠಗಳಿದ್ದವು. ಇದರಲ್ಲಿ ಇಂದು 1200 ಮಠಗಳು ಮಾತ್ರ ಜಾಗೃತಾವಸ್ಥೆಯಲ್ಲಿವೆ. ಮಠಗಳು ನಾಡಿನಲ್ಲಿ ಧರ್ಮಪ್ರಸಾರ ಮಾಡುವ ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿವೆ. ನಾನು ಶ್ರೀಮಠ, ಮಠಾಧೀಶರ ಕಾರ್ಯ ಕುರಿತು ವಿಸ್ತೃತವಾದ ಲೇಖನ ಬರೆದಿದ್ದೇನೆ. 12ನೇ ಶತಮಾನದಲ್ಲಿ 10 ಶರಣ ದಂಪತಿಗಳಿದ್ದರು ಎಂದರು.ಜಿಲ್ಲೆಯಲ್ಲಿ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಘಟಕಗಳು ಕ್ರಿಯಾಶೀಲವಾಗಿವೆ. ಉಳಿದ ತಾಲೂಕಿನಲ್ಲಿಯೂ ತಾಲೂಕು ಘಟಕಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಕಡೆಗೆ ಗಮನ ಹರಿಸಲಾಗುತ್ತಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ 800 ಸದಸ್ಯರು, 500 ಮಹಾಮನೆ ಸದಸ್ಯರು, 38 ದತ್ತಿಗಳು ಇರುವ ಮೂಲಕ ಜಿಲ್ಲೆಯಲ್ಲಿಯೇ ಈ ತಾಲೂಕು ಮೂಂಚೂಣಿಯಲ್ಲಿದೆ. ಅಲ್ಲದೇ ಈ ತಾಲೂಕು ಘಟಕವು ರಾಜ್ಯಮಟ್ಟದ ವಾರ್ಷಿಕ ಸಭೆ, ಜಿಲ್ಲಾ ಸಮ್ಮೇಳನ ಆಯೋಜನೆಯನ್ನು ಅಚ್ಚುಕಟ್ಟಾಗಿ ಮಾಡುವ ರಾಜ್ಯದ ಘಟಕದ ಗಮನ ಸೆಳೆದಿದೆ. ಜಿಲ್ಲಾ ಘಟಕವು 150 ದತ್ತಿ, ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ದತ್ತಿ ಉಪನ್ಯಾಸಗಳ ಮೂಲಕ ನಾಡಿನಲ್ಲಿ ಶರಣರ ಸಂದೇಶಗಳನ್ನು ಪ್ರಸಾರ ಮಾಡುವಲ್ಲಿ ಶರಣ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನಿವೃತ್ತ ಶಿಕ್ಷಕ ಸಂಗಪ್ಪ ಹೂಗಾರ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಎಸ್.ಎ.ದೇಗಿನಾಳ, ದತ್ತಿ ದಾಸೋಹಿಗಳಾದ ಎಚ್.ಎಸ್.ಬಿರಾದಾರ, ಎಫ್.ಟಿ.ಮೇಟಿ, ಬಸವರಾಜೇಶ್ವರಿ ಶೀಲವಂತ, ಅಪ್ಪು ದಂಡಾವತಿ, ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಯುವ ಘಟಕದ ಅಧ್ಯಕ್ಷ ಶರಣು ಬಸ್ತಾಳ ಇದ್ದರು. ಅಂಧಕಲಾವಿದರಾದ ಅಶೋಕ ಜುಗತಿ, ಕಲ್ಮೇಶ ಶಿರಗೂರ ಅವರು ವಚನ ಗಾಯನ ಮಾಡಿದರು. ತಾಲೂಕು ಶಸಾಪ ಅಧ್ಯಕ್ಷ ವೀರಣ್ಣ ಮರ್ತುರ ಪ್ರಾಸ್ತವಿಕವಾಗಿ ಮಾತನಾಡಿದರು. ಆರ್.ಜಿ.ಅಳ್ಳಗಿ ಸ್ವಾಗತಿಸಿದರು. ಎಸ್.ಎ.ಮನಗೂಳಿ ನಿರೂಪಿಸಿದರು.ಜಿಲ್ಲೆಯಲ್ಲಿ ಬಂಥನಾಳಶ್ರೀಗಳು ಅನೇಕ ಕಾಲೇಜುಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಯಾರೂ ಎಂದಿಗೂ ನಕರಾತ್ಮಕ ವಿಚಾರಗಳನ್ನು ಮಾಡದೇ ಸಕರಾತ್ಮಕ ವಿಚಾರಗಳನ್ನು ಮಾಡುವಂತಾಗಬೇಕು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ.-ಡಾ.ವಿ.ಡಿ.ಐಹೊಳ್ಳಿ,
ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ.