ಚನ್ನಪಟ್ಟಣ: ಹಿರಿಯ ನಾಗರಿಕರು ಸಮಾಜದ ಆಸ್ತಿ. ಹಿರಿಯರು ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಯಾವುದೇ ಒತ್ತಡಗಳಿಗೆ ಒಳಗಾಗದೇ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಕುಟುಂಬದ ಜೊತೆಗೆ ಸಮಾಜದ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಬೆರೆಯುವುದರ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ದಾರಿ ದೀಪವಾಗಬೇಕು ಎಂದು ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಅಧ್ಯಕ್ಷ ಡಿ.ಪುಟ್ಟಸ್ವಾಮಿಗೌಡ (ಡಿಪಿಎಸ್) ತಿಳಿಸಿದರು.
ಸಂಘದ ಅಧ್ಯಕ್ಷ ಎಂ.ಸಿ.ಮಲ್ಲಯ್ಯ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘ ಚಟುವಟಿಕೆಯಿಂದ ನಡೆದುಕೊಂಡು ಹೋಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಸಹಕಾರದೊಂದಿಗೆ ೮೦ ವರ್ಷ ತುಂಬಿದ ೯ ಮಂದಿ ಹಿರಿಯ ನಿವೃತ್ತ ನೌಕರರನ್ನು ಗೌರವಿಸಲಾಗುತ್ತಿದೆ. ನಿವೃತ್ತ ನೌಕರರು ಸಂಘದ ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಹಕರಿಸಬೇಕು ಎಂದು ಹೇಳಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಂದರ್ಭದಲ್ಲಿ ೮೦ ವರ್ಷ ತುಂಬಿದ ನಿವೃತ್ತ ನೌಕರರಾದ ಸಿ.ಚನ್ನಪ್ಪ,ಬೆಟ್ಟಯ್ಯ,ಡಿ.ದೊಡ್ಡಯ್ಯ, ಡಾ.ಬಸವರಾಜು, ಪಿ.ಶೇಖರ್, ಕೆ.ಶಿವಣ್ಣ,ಲಿಂಗಮಾದಯ್ಯ, ಕೆಲೆಸ್.ಸಿದ್ದೇಗೌಡ,ಎ.ಪಿ.ಕಾಡೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಶಂಭೂಗೌಡ ನಾಗವಾರ, ನಿವೃತ್ತ ಉಪ ಪ್ರಾಂಶುಪಾಲ ಬೆಟ್ಟಯ್ಯ, ಹಾಗೂ ಸಂಘದ ಖಜಾಂಚಿ ಎಚ್.ಶಿವಣ್ಣ, ತಾಪಂ ಕಚೇರಿ ಸಹಾಯಕ ಲೆಕ್ಕ ಅಧಿಕಾರಿ ಮಮತಾ, ಹಿರಿಯ ನಾಗರಿಕರು ಉಪಸ್ಥಿತರಿದ್ದರು.