ಚುಂಚನಗಿರಿ ಮಠದಲ್ಲಿ 137ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಪಾದನೆ
ಕನ್ನಡಪ್ರಭವಾರ್ತೆ, ಹಾಸನ
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಪರಂಪರೆ, ಆಚಾರ-ವಿಚಾರ, ಆಧ್ಯಾತ್ಮಿಕತೆ ಉಳಿಯಬೇಕೆಂದರೆ ನಾವು ಅದನ್ನು ಅಳವಡಿಸಿಕೊಂಡು ಭವಿಷ್ಯದ ಪೀಳಿಗೆಗೂ ತಿಳಿಸಿಕೊಡುವ ಕೆಲಸ ಮಾಡಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ 137ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆಕ್ರಮಣಕಾರರಿಂದ ದೇಶವನ್ನು ರಕ್ಷಿಸಿಕೊಳ್ಳಲು ಚೀನಾ ದೇಶ ಸುತ್ತಲು ಗೋಡೆ ನಿರ್ಮಿಸಿಕೊಂಡಿತು. ಕಾವಲುಗಾರರು ಲಂಚ ಪಡೆದು ಶತ್ರುಗಳನ್ನು ಒಳಗೆ ಬಿಟ್ಟುಕೊಂಡಿದ್ದರಿಂದ ಅದು ದಾಳಿಗೆ ಒಳಗಾಯಿತು. ಅದೇ ಪರಿಸ್ಥಿತಿ ನಮಗೆ ಎದುರಾಗಬಾರದು. ಸಂಸ್ಕೃತಿ ಹಾಳು ಮಾಡುವುದು ಆಕ್ರಮಣಕಾರರ ಉದ್ದೇಶವಾಗಿದೆ. ಪ್ರಸ್ತುತ ಪ್ರಪಂಚ ಝೆನ್ ಝೀ, ಝೆನ್ ಆಲ್ಫಾ ಹಾಗೂ ಝೆನ್ ಬೀಟಾ ಯುಗದಲ್ಲಿದೆ. ಈಗಿನ ಯುವಕರನ್ನು ಝೆನ್ ಝೀಗೆ ಹೋಲಿಸಿದರೆ ಬಾಲಕರು ಝೆನ್ ಆಲ್ಫಾಗಳಾಗಿದ್ದಾರೆ. ಇನ್ನು ಝೆನ್ ಬೀಟಾಗಳೆಂದರೆ ಈಗ ಹುಟ್ಟಿರುವ ಮಕ್ಕಳು. ಈ ಪೀಳಿಗೆಗೆ ಸಂಸ್ಕಾರ ಕಲಿಸದಿದ್ದರೆ ಇನ್ನೆಂದಿಗೂ ಸುಸಂಸ್ಕೃತ ರಾಷ್ಟ್ರ ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ಪರಂಪರೆ ಬಗ್ಗೆ ಅವಹೇಳನ ಮಾಡುವ ಕೃತ್ಯಗಳು ಹೆಚ್ಚುತ್ತಿವೆ. ಕೌಟುಂಬಿಕ ಸಾಮರಸ್ಯವನ್ನು ಹದಗೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇಷ್ಟು ವರ್ಷಗಳ ಕಾಲ ನಾವು ಯಾರನ್ನು ಆದರ್ಶ ಪುರುಷರು, ಮಹನೀಯರು ಎಂದು ಹೇಳಿಕೊಂಡಿದ್ದೇವೆಯೋ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗುವ ಕೆಲಸ ನಮೆಲ್ಲರಿಂದ ಆಗಬೇಕೆಂದು ಸಲಹೆ ನೀಡಿದರು.
ಪ್ರಸಕ್ತ ಪರಿಸ್ಥಿತಿಯಲ್ಲಿ ಹಿಂದುತ್ವ ವಿಚಾರವಾಗಿ ಉಪನ್ಯಾಸ ನೀಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕ ವಾದಿರಾಜ್, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತವನ್ನು ಏಕರೂಪದ ದೇಶವಾಗಿ ನೋಡಲು ಯಾರು ಬಯಸುವುದಿಲ್ಲ. ಅನೇಕ ಭಾಷೆ, ಆಚಾರ-ವಿಚಾರ, ಸಂಪ್ರದಾಯಗಳನ್ನು ಹೊಂದಿರುವ ದೇಶವನ್ನು ಒಂದು ರೂಪದಲ್ಲಿ ಕಾಣುಸುವುದು ಅಸಾಧ್ಯವೆಂದು ಡಾ.ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಆದರೆ, ವಿವಿಧತೆಯಲ್ಲೂ ಏಕತೆಯನ್ನು ಕಾಣುವುದು ಮುಖ್ಯ. ಆರ್‌ಎಸ್‌ಎಸ್ ಕಳೆದ ನೂರು ವರ್ಷಗಳಿಂದ ಹಿಂದುತ್ವದಡಿ ಕೆಲಸ ಮಾಡುತ್ತಿದೆ. ಅದು ತನ್ನ ಕಾರ್ಯಯೋಜನೆಯಲ್ಲಿ ಸಾಫಲ್ಯತೆ ಕಂಡಿದೆ ಎಂದರೆ ಸುಳ್ಳಾಗುತ್ತದೆ. ಆದರೆ, ಆ ನಿಟ್ಟಿನಲ್ಲಿ ಭಾರತವನ್ನು ಒಗ್ಗೂಡಿಸುವ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು.
ಭಾರತವನ್ನು ಕತ್ತಲ ದೇಶ, ಹಾವಾಡಿಗರ ದೇಶ, ಅನಕ್ಷರಸ್ಥರ ನಾಡು ಎಂದು ಹೀಗಳೆಯುತ್ತಿದ್ದರು. ಈ ದೇಶ ಅಷ್ಟೊಂದು ಬಡತನದಲ್ಲಿದ್ದಿದ್ದರೆ ೮೦೦ ವರ್ಷಗಳ ಕಾಲ ವಿದೇಶಿಗರು ಏಕೆ ಆಳ್ವಿಕೆ ಮಾಡಿದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಭಾರತ ಜಗತ್ತಿನ ಅತ್ಯಧಿಕ ಶ್ರೀಮಂತ ರಾಷ್ಟ್ರವಾಗಿತ್ತು. ಕರಕುಶಲ ವಸ್ತುಗಳ ತಯಾರಿಕೆ, ವಾಸ್ತುಶಿಲ್ಪ, ಶಿಕ್ಷಣ, ವಿಜ್ಞಾನ, ಕಲೆ, ಸಾಹಿತ್ಯದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿತ್ತು. ಅದೇ ರೀತಿ ಭಿನ್ನ ವಿಭಿನ್ನಿ ಜಾತಿ, ಆಚಾರಗಳು, ಸಂಪ್ರದಾಯಗಳಿದ್ದವು. ಅದೆಲ್ಲವನ್ನೂ ಒಗ್ಗೂಡಿಸುವುದು ಸವಾಲಿನ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಆರ್‌ಎಸ್‌ಎಸ್ ತನ್ನದೇಯಾದ ಯೋಜನೆ ಮೂಲಕ ಅಸ್ತಿತ್ವ ತಾಳಿತು. ಹಿಂದುತ್ವದ ಹೆಸರಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತಿದೆ. ವಿವಿಧತೆಯಲ್ಲೇ ದೇಶವನ್ನು ಒಂದು ಮಾಡಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಹಿಂದುಗಳು ಎಂದರೆ ಎಲ್ಲರೂ ಒಳಗೊಳ್ಳುತ್ತಾರೆ. ಇಲ್ಲಿಯೇ ಹುಟ್ಟಿದ ಮುಸ್ಲಿಂ, ಕ್ರಿಶ್ಚಿಯನ್ನರು ಸಹ ಮೂಲತಃ ಹಿಂದುಗಳೇ ಆಗಿದ್ದಾರೆ. ಅವರ್‍ಯಾರು ಬೇರೆ ದೇಶದಿಂದ ಬಂದವರಲ್ಲ. ಅವರ ಪೂರ್ವಿಕರು ಭಾರತೀಯರೇ ಎಂಬ ಸತ್ಯವನ್ನು ಅರಿಯಬೇಕು. ಹಾಗಾಗಿ ಅವರನ್ನೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ದೇಶವನ್ನು ಏಕಸೂತ್ರದಡಿ ಕೊಂಡೊಯಯ್ಯುವುದು ಸುಲಭ ಕೆಲಸವಲ್ಲ. ಎಲ್ಲರೂ ಒಂದು ಎಂಬ ಭಾವನೆಯಲ್ಲಿ ಸಮಾಜ ಸಾಗಬೇಕಿದೆಯೆಂದು ಅವರು ಪ್ರತಿಪಾದಿಸಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು, ಆರ್‌ಎಸ್‌ಎಸ್ ಮುಖಂಡ ವಿಜಯಕುಮಾರ್ ನಾರ್ವೆ, ಶ್ರೀಮಠದ ಭಕ್ತ ಎ.ಎಚ್.ಆನಂದ್ ಮತ್ತಿತರರಿದ್ದರು.