ಬೆಟ್ಟದ ಮುನೇಶ್ವರಸ್ವಾಮಿ ಕ್ಷೇತ್ರ ಧಾರ್ಮಿಕ ಪ್ರವಾಸಿ ತಾಣವಾಗಲಿ

KannadaprabhaNewsNetwork |  
Published : Nov 24, 2026, 12:30 AM IST
ಕೆ ಕೆ ಪಿ ಸುದ್ದಿ 02: ಮರಳೇಗವಿ ಮಠದಲ್ಲಿ ನೂತನ ದಾಸೋಹ ಭವನ ಉದ್ಘಾಟನೆ.  | Kannada Prabha

ಸಾರಾಂಶ

ಕನಕಪುರ: ಭಕ್ತಿ, ಶ್ರದ್ಧೆ ಮತ್ತು ಸನ್ಮಾರ್ಗದ ಮೂಲಕ ದೇವರನ್ನು ಕಾಣಲು ಸಾಧ್ಯ. ದೇವರಿಗೆ ಬೇಕಾಗಿರುವುದು ಐಶ್ವರ್ಯ ಮತ್ತು ಆಡಂಬರವಲ್ಲ, ಅಹಂಕಾರವಿಲ್ಲದ ಶುದ್ಧ ಮನಸ್ಸು ಹಾಗೂ ನಿಷ್ಕಲ್ಮಶ ಭಕ್ತಿ ಎಂದು ಶ್ರೀ ಕ್ಷೇತ್ರ ಮರಳೆಗವಿ ಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ ಹೇಳಿದರು

ಕನಕಪುರ: ಭಕ್ತಿ, ಶ್ರದ್ಧೆ ಮತ್ತು ಸನ್ಮಾರ್ಗದ ಮೂಲಕ ದೇವರನ್ನು ಕಾಣಲು ಸಾಧ್ಯ. ದೇವರಿಗೆ ಬೇಕಾಗಿರುವುದು ಐಶ್ವರ್ಯ ಮತ್ತು ಆಡಂಬರವಲ್ಲ, ಅಹಂಕಾರವಿಲ್ಲದ ಶುದ್ಧ ಮನಸ್ಸು ಹಾಗೂ ನಿಷ್ಕಲ್ಮಶ ಭಕ್ತಿ ಎಂದು ಶ್ರೀ ಕ್ಷೇತ್ರ ಮರಳೆಗವಿ ಮಠದ ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಹೂಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಬೆಟ್ಟದ ಮುನೇಶ್ವರಸ್ವಾಮಿ ಸನ್ನಿಧಿಯಲ್ಲಿ ನಿರ್ಮಿಸಿರುವ ದಾಸೋಹ ಭವನದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು,

ಪ್ರಕೃತಿಯ ಮಡಿಲಿನಲ್ಲಿ ಸಾಧು-ಸಂತರು ನಡೆಸುವ ತಪಸ್ಸು ಕೇವಲ ವೈಯಕ್ತಿಕ ಮೋಕ್ಷಕ್ಕೆ ಸೀಮಿತವಾಗಿಲ್ಲ. ಅದು ಲೋಕ ಕಲ್ಯಾಣ ಮತ್ತು ಪರಿಸರದ ಸಮತೋಲನ ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುನೇಶ್ವರ ಬೆಟ್ಟದ ತಪ್ಪಲಿನಲ್ಲಿ ಮುನೇಶ್ವರರು ನೆಲೆಸಿರುವುದು ಈ ಕ್ಷೇತ್ರದ ಧಾರ್ಮಿಕ ಮಹತ್ವವನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಭಕ್ತಿ ಮತ್ತು ಸನ್ಮಾರ್ಗದಲ್ಲಿ ದೇವರನ್ನು ಕಾಣಲು ಸಾಧ್ಯ. ಭಕ್ತಿಯಿಂದ ಹಾಗೂ ಅಚಲ ನಂಬಿಕೆಯಿಂದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮನೋಭಾವ ಇರಬೇಕು. ದೇವರು ಮನುಷ್ಯನೊಂದಿಗೆ ನೇರವಾಗಿ ಇರಲು ಸಾಧ್ಯವಿಲ್ಲದ ಕಾರಣ ತಂದೆ, ತಾಯಿ ಮತ್ತು ಗುರುಗಳ ರೂಪದಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮಲ್ಲಿದೆ. ಭಾರತೀಯ ಆಧ್ಯಾತ್ಮಿಕ ಪರಂಪರೆ ಹಾಗೂ ಶರಣರ ವಚನಗಳಲ್ಲಿ ಭಕ್ತಿಯ ಮಹತ್ವ ಸಾರಲಾಗಿದೆ. ದೇವರಿಗೆ ನಮ್ಮ ಐಶ್ವರ್ಯ, ಆಡಂಬರ ಮುಖ್ಯವಲ್ಲ; ಅಹಂಕಾರವಿಲ್ಲದ ಶುದ್ಧ ಮನಸ್ಸು ಮತ್ತು ನಿಷ್ಕಲ್ಮಶ ಭಕ್ತಿಯೇ ಮುಖ್ಯ. ಮನುಷ್ಯನ ಹುಟ್ಟು ಮತ್ತು ಸಾವು ನಿಶ್ಚಿತವಾಗಿದ್ದು, ಇವೆರಡರ ನಡುವಿನ ಜೀವನದಲ್ಲಿ ನಾವು ಏನು ಸಾಧಿಸಿದ್ದೇವೆ ಎಂಬುದು ಅತ್ಯಂತ ಮುಖ್ಯ ಎಂದು ಹೇಳಿದರು.

ದಾಸೋಹ ಭವನದ ಪರಿಕಲ್ಪನೆ ಬಸವಣ್ಣನವರದು. ಕಾಯಕವೇ ಕೈಲಾಸ ಎಂಬ ತತ್ವವನ್ನು ಜಗತ್ತಿಗೆ ಸಾರಿದ ಬಸವಣ್ಣನವರು ದಾಸೋಹದ ಮೂಲಕ ಸಮಾನತೆ, ಸೇವೆ ಮತ್ತು ಮಾನವೀಯತೆಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ದಾಸೋಹ ಭವನ ಉದ್ಘಾಟಿಸಿದ ಮಾಜಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಬಹಳಷ್ಟು ಇತಿಹಾಸ ಹೊಂದಿರುವ ಮುನೇಶ್ವರ ಬೆಟ್ಟದಲ್ಲಿ ಪ್ರತಿವರ್ಷವೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಲವು ವರ್ಷಗಳಿಂದ ದೇವಸ್ಥಾನದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಬೇಕೆಂಬ ಭಕ್ತರ ಬೇಡಿಕೆ ಇತ್ತು. ಇದೀಗ ದಾನಿಗಳ ಸಹಕಾರದಿಂದ ದಾಸೋಹ ಭವನ ನಿರ್ಮಾಣಗೊಂಡು ಉದ್ಘಾಟನೆಯಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.

ದಟ್ಟ ಅರಣ್ಯದ ಬೆಟ್ಟದ ತಪ್ಪಲಿನಲ್ಲಿ ದೇವಾಲಯ ನೆಲೆಸಿರುವುದರಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಉತ್ತಮ ರಸ್ತೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಅರಣ್ಯ ಇಲಾಖೆಯ ಕಾನೂನುಗಳು ತೊಡಕಾಗಿವೆ. ದೇವಸ್ಥಾನಕ್ಕೆ ಸುಗಮ ರಸ್ತೆ ನಿರ್ಮಾಣವಾಗಬೇಕು ಎಂಬುದು ಭಕ್ತರ ಬಹುದಿನಗಳ ಬೇಡಿಕೆಯಾಗಿದೆ. ದೇವರ ಆಶೀರ್ವಾದ ಮತ್ತು ಎಲ್ಲರ ಸಹಕಾರ ದೊರೆತರೆ ಮುಂದಿನ ದಿನಗಳಲ್ಲಿ ಈ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ದೇವಸ್ಥಾನದ ಅರ್ಚಕರಾದ ಕೆಂಪರಾಜು ಮತ್ತು ಶಿವಣ್ಣ ಅವರು ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಭಕ್ತಿಗೀತೆ ಗಾಯನ ನಡೆಯಿತು. ಆಗಮಿಸಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ .ರವಿ, ದೇವಸ್ಥಾನ ಸಮಿತಿಯ ಮುನಿಲಿಂಗೇಗೌಡ, ಶಿವಣ್ಣ, ವೀರಣ್ಣಗೌಡ, ಎಸ್.ಕೆ. ಶಿವರಾಜು, ಪುಟ್ಟೇಗೌಡ, ಗೋವಿಂದೇಗೌಡ, ಎಸ್.ಎಂ. ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಗಿರೀಶ್, ಸುರೇಶ್, ಸ್ವಾಮಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಉಪಸ್ಥಿತರಿದ್ಧರು.

ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕಿನ ಹೂಕುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಬೆಟ್ಟದ ಮುನೇಶ್ವರಸ್ವಾಮಿ ಸನ್ನಿಧಿಯಲ್ಲಿ ನಿರ್ಮಿಸಿರುವ ದಾಸೋಹ ಭವನವನ್ನು ಮಾಜಿ ಸಂಸದ ಡಿ.ಕೆ.ಸುರೇಶ್‌ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಎಸ್ .ರವಿ, ದೇವಸ್ಥಾನ ಸಮಿತಿಯ ಮುನಿಲಿಂಗೇಗೌಡ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಪಿಎಂಸಿಯಲ್ಲಿ ರೈತರಿಂದ ಕಮಿಷನ್ ವಸೂಲಿ ಮಾಡುವಂತಿಲ್ಲ
ಕನ್ನಡಕ್ಕೆ ನುಡಿದಂತೆ ಬರೆಯುವ, ಬರೆದಂತೆ ನುಡಿವ ಅದ್ಭುತ ಶಕ್ತಿ