ಮಕ್ಕಳಲ್ಲಿ ದೇಶಾಭಿಮಾನ, ದೇಶಭಕ್ತಿ ಮೂಡಿಸುವ ಪ್ರಕ್ರಿಯೆ ಸಾರ್ವತ್ರಿಕಗೊಳ್ಳಬೇಕೆಂದು ಗುಲ್ಬರ್ಗದ ಸಿದ್ದಬಸವ ಸ್ವಾಮೀಜಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಕ್ಕಳಲ್ಲಿ ದೇಶಾಭಿಮಾನ, ದೇಶಭಕ್ತಿ ಮೂಡಿಸುವ ಪ್ರಕ್ರಿಯೆ ಸಾರ್ವತ್ರಿಕಗೊಳ್ಳಬೇಕೆಂದು ಗುಲ್ಬರ್ಗದ ಸಿದ್ದಬಸವ ಸ್ವಾಮೀಜಿ ಮನವಿ ಮಾಡಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾದ ಮೂರು ದಿನಗಳ ರಾಜ್ಯ ಮಟ್ಟದ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ವೀರವನಿತೆ ಒನಕೆ ಓಬವ್ವ ಪ್ರಾಣವನ್ನು ಲೆಕ್ಕಿಸದೆ ಒನಕೆಯಿಂದ ಶತೃಗಳನ್ನು ಸದೆ ಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದಳು. ಅಂತಹ ಶೌರ್ಯ ನಿಮ್ಮಲ್ಲಿ ಮೂಡಬೇಕು ಎಂದರು. ರಾಜ ಮಹಾರಾಜರು, ಪಾಳೆಯಗಾರರು ಆಳಿದ ಚಿತ್ರದುರ್ಗಕ್ಕೆ ತನ್ನದೆ ಆದ ಇತಿಹಾಸವಿದೆ. ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿಯಾದುದು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಇಲ್ಲಿನ ಇತಿಹಾಸ ತಿಳಿದುಕೊಳ್ಳಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಶಿಸ್ತು, ಆತ್ಮಬಲ ಬೆಳೆಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮುಖ್ಯ ಆಯುಕ್ತ ಕೆ.ರವಿಶಂಕರ್ ರೆಡ್ಡಿ ಮಾತನಾಡಿ, ಸಂಸ್ಥೆಯಿಂದ ದೇಶ ಕಟ್ಟುವ ನಾಯಕತ್ವ ಬೆಳೆಯುತ್ತದೆ. ಭಾರತದ ಭವ್ಯ ಭವಿಷ್ಯ ಯುವ ಜನಾಂಗದ ಮೇಲೆ ನಿಂತಿದೆ. ಶಿಕ್ಷಣದ ಜೊತೆ ಇಂತಹ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವುದರಿಂದ ಬದುಕುವ ಕೌಶಲ್ಯ ಕಲಿಯಬಹುದು. ಇಂದಿನ ಮಕ್ಕಳಲ್ಲಿ ಮೌಲ್ಯ, ಸಿದ್ಧಾಂತಗಳು ಮಾಯವಾಗುತ್ತಿರುವುದು ನೋವಿನ ಸಂಗತಿ ಎಂದರು. ಸಾಮಾಜಿಕ ಜಾಲತಾಣ, ಮೊಬೈಲ್‍ಗಳ ಗೀಳಿನಿಂದ ಯುವ ಪೀಳಿಗೆ ಹೊರ ಬರಬೇಕಿದೆ. ಮೊಬೈಲ್‌ನ್ನು ಒಳ್ಳೆಯದಕ್ಕಷ್ಟೆ ಬಳಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಿರಿ. ವಯಸ್ಸಾದ ತಂದೆ-ತಾಯಿಗಳನ್ನು ವೃದ್ದಾಶ್ರಮಕ್ಕೆ ಸೇರಿಸುವ ಪದ್ದತಿ ಒಳ್ಳೆಯದಲ್ಲ. ಜೀವನದಲ್ಲಿ ಏನಾದರೂ ಸ್ಪಷ್ಟ ಗುರಿಯಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಪಠ್ಯಪುಸ್ತಕದ ಜೊತೆ ಕೌಶಲ್ಯ ಶಿಕ್ಷಣ ಕಲಿತಾಗ ಸ್ವಾವಲಂಬಿಗಳಾಗಿ ಬದುಕಬಹುದು ಎಂದರು. ಗುರುಮಠಕಲ್‍ನ ಶಾಂತವೀರ ಸ್ವಾಮೀಜಿ ಮಾತನಾಡಿ, ಏಳುಸುತ್ತಿನ ಕಲ್ಲಿನಕೋಟೆಯಿರುವ ಚಿತ್ರದುರ್ಗ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿದೆ. ಮುರುಘಾಮಠಕ್ಕೆ ನಾಲ್ಕು ನೂರು ವರ್ಷಗಳ ರಾಜಪರಂಪರೆಯ ಇತಿಹಾಸವಿದೆ. ಐತಿಹಾಸಿಕ, ಚಾರಿತ್ರಿಕ, ಧಾರ್ಮಿಕ ಸ್ಥಳಗಳಿಗೆ ಜಿಲ್ಲೆ ಹೆಸರುವಾಸಿ. ಮೂರು ದಿನಗಳ ಕಾಲ ತರಬೇತಿ ಪಡೆಯುವ ನೀವುಗಳನ್ನು ಇಲ್ಲಿನ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು. ಶಿಸ್ತು ಮತ್ತು ಸಮಯ ಪಾಲನೆಗೆ ಹೆಸರುವಾಸಿಯಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸೇರುವುದು ಒಂದು ಸುವರ್ಣಾವಕಾಶ. ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಹೊರ ಹೊಮ್ಮಬೇಕಾದರೆ ಇಂತಹ ಸಂಸ್ಥೆಗಳಲ್ಲಿ ಮೊದಲು ಸೇವೆ ಸಲ್ಲಿಸಬೇಕು. ಸಮಯ ಅತ್ಯಂತ ಅಮೂಲ್ಯವಾದುದು ಯಾರನ್ನು ಕಾಯುವುದಿಲ್ಲ. ಹಾಗಾಗಿ ಸಮಯಕ್ಕೆ ಹೆಚ್ಚಿನ ಮಹತ್ವ ಕೊಡಿ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಜಿ.ಎಸ್.ಉಜ್ಜಿನಪ್ಪ, ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಜಿಲ್ಲಾ ಸ್ಥಾನಿಕ ಆಯುಕ್ತರಾದ ಎಂ.ಕೆ.ಅನಂತರೆಡ್ಡಿ, ಪಿ.ವೈ.ದೇವರಾಜ್‍ಪ್ರಸಾದ್, ರೋವರ್ಸ್ ಶಿಬಿರದ ನಾಯಕ ಟಿ.ಎಸ್.ಶಿವಣ್ಣ, ರೇಂಜರ್ಸ್ ಶಿಬಿರದ ನಾಯಕಿ ಅಶ್ವಿನಿ ಆರ್.ಎಲ್, ರೇಂಜರ್ಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ಕೆ.ಲೀಲಾವತಿ, ರೋವರ್ಸ್ ಜಿಲ್ಲಾ ನೋಡಲ್ ಅಧಿಕಾರಿ ಎಚ್.ತಿಪ್ಪೇಸ್ವಾಮಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಜಂಟಿ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ಜಿಲ್ಲಾ ಸಂಘಟಕರುಗಳಾದ ಕೆ.ಟಿ.ಮಲ್ಲೇಶಪ್ಪ, ಸಿ.ರವಿ ಶಿಬಿರದಲ್ಲಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.