ಕರಾವಳಿ ಕಲಾವಿದರ ಹೆಸರು ಎಲ್ಲೆಡೆ ಪಸರಿಸಲಿ: ಡಾ.ಎಂಎನ್‌ಆರ್‌

KannadaprabhaNewsNetwork |  
Published : Nov 09, 2026, 02:45 AM IST
ಬಹುನಿರೀಕ್ಷಿತ ‘ವಾದಿರಾಜ ವಾಲಗ ಮಂಡಳಿ’ ಚಲನಚಿತ್ರದ ಪೋಸ್ಟರ್‌ನ್ನು ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಬಿಡುಗಡೆ ಮಾಡಿದರು | Kannada Prabha

ಸಾರಾಂಶ

ಎಂ.ಎನ್.ಆರ್. ಪ್ರೊಡಕ್ಷನ್ ಲಾಂಛನದಡಿ ಕರಾವಳಿಯ ಹಾಸ್ಯ ನಟರ ದಂಡು ಅಭಿನಯಿಸಿರುವ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕವೂ ಕರಾವಳಿಯ ಕಲಾವಿದರ ಹೆಸರು ಕನ್ನಡ ಮಾತ್ರವೆ ಎಲ್ಲೆಡೆ ಪಸರಿಸಲಿ ಎಂದು ಚಿತ್ರದ ನಿರ್ಮಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಮಂಗಳೂರು : ಎಂ.ಎನ್.ಆರ್. ಪ್ರೊಡಕ್ಷನ್ ಲಾಂಛನದಡಿ ಕರಾವಳಿಯ ಹಾಸ್ಯ ನಟರ ದಂಡು ಅಭಿನಯಿಸಿರುವ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕವೂ ಕರಾವಳಿಯ ಕಲಾವಿದರ ಹೆಸರು ಕನ್ನಡ ಮಾತ್ರವೆ ಎಲ್ಲೆಡೆ ಪಸರಿಸಲಿ ಎಂದು ಚಿತ್ರದ ನಿರ್ಮಾಪಕ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.ಶನಿವಾರ ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ತಮ್ಮ ಎಂ.ಎನ್‌.ಆರ್‌. ಪ್ರೊಡಕ್ಷನ್‌ ಬ್ಯಾನರ್‌ನ ‘ವಾದಿರಾಜ ವಾಲಗ ಮಂಡಳಿ’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶಸ್ವಿ ಸಿನೆಮಾ ‘ಗಲಾಟೆ’ ಮತ್ತು ‘ಜೋಗುಳ’ ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದು ಉತ್ತಮ ಅಭಿರುಚಿಯ ಕನ್ನಡ ಸಿನೆಮಾಗಳನ್ನು ನಿರ್ಮಾಣ ಮಾಡುವಲ್ಲಿ ಒಲವು ತೋರಿಸಿದೆ. ಬಹು ನಿರೀಕ್ಷೆಯ ‘ವಿವಿಎಂ’ ಚಿತ್ರದ ಪೋಸ್ಟರ್‌ನ್ನು ಅನಾವರಣಗೊಳಿಸುವ ಮೂಲಕ ಚಲನಚಿತ್ರದ ಮೊದಲ ನೋಟದ ಪರಿಚಯ ಮಾಡಿಸಿದ್ದೇವೆ. ಈ ಸಿನೆಮಾದಲ್ಲೂ ಕಾರವಳಿಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಇದೊಂದು ಹಾಸ್ಯಭರಿತ, ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ ಎಂದರು.

ಬ್ರಹ್ಮಾವರ, ಮಂಗಳೂರು, ಮುಲ್ಕಿ, ಕಾಸರಗೋಡು ಮುಂತಾದ ಪ್ರದೇಶದಲ್ಲಿ ಸುಮಾರು ೫೫ ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರ ಕರಾವಳಿ ಕನ್ನಡದ ಸೊಗಡಿನಲ್ಲಿದ್ದು ಉತ್ತಮವಾಗಿ ಮೂಡಿಬಂದಿದೆ ಎಂದರು.

ಗುಂಡುಮಾಮ ಖ್ಯಾತಿಯ ನವೀನ್ ಡಿ.ಪಡೀಲ್, ‘ಸು ಫ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು, ಲಕ್ಷ್ಮಣ ಮಲ್ಲೂರು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಅರ್ಜುನ್ ವೇದಾಂತ್, ಅಥರ್ವ ಪ್ರಕಾಶ್ ನಾಯಕರಾಗಿ, ತನ್ವಿ ರಾವ್, ವೇನ್ಯ ರೈ ನಾಯಕಿಯರಾಗಿ ಮಿಂಚಿದ್ದಾರೆ. ಅನುಭವಿ ಛಾಯಾಗ್ರಾಹಕ ಚೆನ್ನೈಯ ಎಸ್.ಚಂದ್ರಶೇಖರನ್ ಕೈಚಳಕ ಚಿತ್ರಕ್ಕಿದೆ. ಮಣಿಕಾಂತ್ ಕದ್ರಿ ಸಂಗೀತ ಸಿನಿ ರಸಿಕರ ಮನತಣಿಸಲಿದೆ. ಸ್ಟಂಟ್ ಶಿವು ಸಾಹಸವಿದೆ. ವಿನಾಯಕ ಆಚಾರ್ಯ ನೃತ್ಯ ನಿರ್ದೇಶನವಿದೆ. ಜಯಪ್ರಕಾಶ್ ತುಂಬೆಯವರು ಸಹ ನಿರ್ಮಾಪಕರಾಗಿ ಸಹಕರಿಸಿದ್ದಾರೆ. ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಪ್ರೊಡಕ್ಷನ್ ಮ್ಯಾನೇಜರ್ ಆಗಿ ದುಡಿದಿದ್ದಾರೆ. ಪ್ರಸಿದ್ದ ಕಲಾವಿದ ದೇವಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ವರಾಹ ರೂಪಂ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ, ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ ಎಂದರು.ಹಾಸ್ಯ ಮತ್ತು ಕುತೂಹಲಭರಿತ ಕಥಾಹಂದರ ಹೊಂದಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಕುಟುಂಬ ಸಮೇತ ಒಟ್ಟಾಗಿ ಕುಳಿತು ನೋಡಬಹುದಾದ ಮನೋರಂಜನಾತ್ಮಕ ಸಿನೆಮಾವಾಗಿ ಮೂಡಿಬಂದಿದೆ. ಕರಾವಳಿಯ ಸಂಭಾಷಣಾ ಶೈಲಿ ಮತ್ತು ಕಥಾಹಂದರ ಇದರ ಧನಾತ್ಮಕ ಅಂಶಗಳು. ಚಲನಚಿತ್ರದ ನವಿರಾದ ಹಾಸ್ಯ ಮತ್ತು ಗುಣಮಟ್ಟವನ್ನು ನೋಡಿ ಇದನ್ನು ನೆರೆರಾಜ್ಯದ ಕೇರಳಿಗರೂ ಇಷ್ಟ ಪಡುತ್ತಾರೆ ಎಂಬ ವಿಶ್ವಾಸದಿಂದ ಇದನ್ನು ಮಲೆಯಾಳಂ, ತಮಿಳು ಭಾಷೆಗಳ ಡಬ್ಬಿಂಗ್ ನಡೆಯುತ್ತಿದ್ದು ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ಛಾಯಾಗ್ರಾಹಕ ಚೆನ್ನೈಯ ಎಸ್.ಚಂದ್ರಶೇಖರ್‌, ನಿರ್ದೇಶಕ ಶಶಿರಾಜ್ ಕಾವೂರು, ವಿವಿಎಂ ತಂಡದ ನವೀನ್ ಡಿ.ಪಡೀಲ್, ಮಣಿಕಾಂತ್ ಕದ್ರಿ ಮತ್ತಿತರರು ಇದ್ದರು.ನಿರ್ದೇಶಕ ಶಶಿರಾಜ್‌ ಕಾವೂರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

ಸಂಗೀತಮಯ ಸಿನಿಮಾ

ವಾದಿರಾಜ ವಾಲಗ ಮಂಡಳಿ ಸಿನೆಮಾದಲ್ಲಿ ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡಾಗಿದ್ದು, ನಾಲ್ಕು ತುಣುಕು ಹಾಡುಗಳಿವೆ. ಬ್ರಹ್ಮಕಲಶ ಹಾಡು ಹಾಡಿದ ಕೆನಡಾ ಮೂಲದ ಅಭಿ ವಿ., ವರಾಹರೂಪಂ ಹಾಡಿದ ಚೆನ್ನೈ ಮೂಲದ ಸಾಯಿವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು, ಮಣಿಕಾಂತ್ ಕದ್ರಿ ಮುಂತಾದವರು ಹಾಡುಗಳಿಗೆ ದನಿಯಾಗಿದ್ದು ಎಲ್ಲ ಹಾಡುಗಳು ಇಂಪಾಗಿ ಮೂಡಿಬಂದಿವೆ. ಚಿತ್ರ ತೆರೆಗೆ ಬರಲು ತಯಾರಿದ್ದರೂ ಬೇರೆ ಸಿನೆಮಾಗಳಿಗೆ ಸ್ಪರ್ಧೆ ಆಗದಂತೆ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ