ಮಡಿಕೇರಿಯಲ್ಲಿ ಕನ್ನಡ ಗೀತೆಗಳ ಕಂಪು ಬೀರಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

KannadaprabhaNewsNetwork |  
Published : Nov 25, 2025, 03:00 AM IST
ಚಿತ್ರ : 24ಎಂಡಿಕೆ4 : ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯಿಂದ ನಡೆದ ಸಂಗೀತ ಕಾರ್ಯಕ್ರಮ.  | Kannada Prabha

ಸಾರಾಂಶ

ಜಿಲ್ಲೆಯಾದ್ಯಂತಲಿನ 53 ಕಲಾವಿದರ 33 ಹಾಡುಗಳು ಕಲಾಪ್ರೇಮಿಗಳ ಮನಸೊರೆಗೊಂಡವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಿಕ್ಕಿರಿದು ಸೇರಿದ್ದ ಕಲಾಪ್ರೇಮಿಗಳ ಸಮ್ಮುಖದಲ್ಲಿ ಕನ್ನಡದ ಅಪೂರ್ವ ಗೀತೆಗಳ ಮಾಧುರ್ಯ ಅನಾವರಣಗೊಳ್ಳುತ್ತಿರುವಂತೆಯೇ ಕೇಳುಗರು ಚಪ್ಪಾಳೆ ತಟ್ಟಿ, ತಲೆದೂಗಿ ಕನ್ನಡದ ಗೀತೆಗಳ ಸಾಹಿತ್ಯ, ಸಂಗೀತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ಕು ಗಂಟೆಗಳ ಕಾಲ ಮಧುರವಾದ ಗೀತೆಗಳು ಸಭಾಂಗಣದಲ್ಲಿ ಮಾರ್ದನಿಸಿದವು.ನಗರದ ರೆಡ್ ಬ್ರಿಕ್ಸ್ ನ ಸತ್ಕಾರ್ ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘ ಮತ್ತು ಮುಳಿಯ ಚಿನ್ನಾಭರಣಗಳ ಸಂಸ್ಥೆ ವತಿಯಿಂದ ಆಯೋಜಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತಗಾಯನ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ 53 ಕಲಾವಿದರ 33 ಹಾಡುಗಳು ಕಲಾಪ್ರೇಮಿಗಳ ಮನಸೂರೆಗೊಂಡವು.

ಹೆಮ್ಮೆ ತಂದಿದೆ:

ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವಾರ್ಪಣೆ ನೆರವೇರಿಸಿ ಮಾತನಾಡಿದ ಮುಳಿಯ ಚಿನ್ನಾಭರಣ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಭಾರತದಲ್ಲಿರುವವರೆಲ್ಲರೂ ಹೇಗೆ ಭಾರತೀಯರೋ ಹಾಗೇ ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡಿಗರೇ ಆಗಿದ್ದಾರೆ. ಬೆಂಗಳೂರಿನಂಥ ರಾಜಧಾನಿಯಲ್ಲಿ ಕನ್ನಡ ಉಳಿಸಿ ಎಂಬ ಕೂಗು ಹೆಚ್ಚಾಗುತ್ತಿರುವಾಗ ಮಡಿಕೇರಿಯಂಥ ಪುಟ್ಟ ನಗರಗಳಲ್ಲಿ ಕನ್ನಡದ ಮಹತ್ವ ಸಾರುವ ಕಾರ್ಯಕ್ರಮಗಳಿಗೆ ಅತ್ಯಧಿಕ ಕನ್ನಡ ಪ್ರೇಮಿಗಳು ಸೇರಿರುವುದು ಹೆಮ್ಮೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಬಹುತೇಕರು ಬಾಲ್ಯದಿಂದಲೇ ಕೇಳಿ ಬೆಳೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಹುಯಿಲಗೋಳ ನಾರಾಯಣ ರಾವ್ ರಚಿಸಿ 100 ವರ್ಷಗಳು ಸಂಪೂರ್ಣವಾದ ಹಿನ್ನಲೆಯಲ್ಲಿ ಈ ಗೀತೆಯ ಮಹತ್ವವನ್ನು ಸ್ಮರಿಸಿಕೊಳ್ಳಲು ಈ ಗೀತಗಾಯನ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮ ಸುಳ್ಳು ಮಾಡಿದೆ:

ಹಿರಿಯ ಕಲಾವಿದ ಜಿ.ಚಿದ್ವಿಲಾಸ್ ಪ್ರಾಸ್ತಾವಿಕವಾಗಿ ಮಾತನಾಡಿ,

ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹದ ಕೊರತೆ ಇದೆ ಎನ್ನುವುದನ್ನು ಈ ಕಾರ್ಯಕ್ರಮ ಸುಳ್ಳು ಮಾಡಿದೆ ಎಂದು ಹೇಳಿದರು. ಗೀತ ಗಾಯನ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತದಿಂದ ಬಂದ ಹಲ ಸಂಖ್ಯೆಯ ಕನ್ನಡಾಭಿಮಾನಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದ ಕಾರ್ಯಕ್ರಮವನ್ನು ಸಂಘದ ನಿರ್ದೇಶಕ ರಂಜಿತ್ ಕವಲಪಾರ ಹಾಗೂ ಗಾಯತ್ರಿ ಚೆರಿಯಮನೆ ನಿರೂಪಿಸಿದರು. ಸಂಘದ ಸಲಹೆಗಾರರಾದ ಟಿ.ಪಿ. ರಮೇಶ್, ಬಿ.ಜಿ. ಅನಂತಶಯನ, ಖಜಾಂಚಿ ಟಿ.ಕೆ.ಸಂತೋಷ್, ಕ್ಷೇಮಾಭಿವೃದ್ದಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಶ್‌ ಭೂತನಕಾಡು, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಮುದೋಷ್ ಪೂವಯ್ಯ, ನಿರ್ದೇಶಕರು ಹಾಜರಿದ್ದರು. ವಿವಿಧ ಸಂಘಸಂಸ್ಥೆಗಳ ಪ್ರಮುಖರು ಗೀತಗಾಯನ ಸಾಕ್ಷೀಕರಿಸಿದರು.----------ಬಾಕ್ಸ್--------------ಮನಸೆಳೆದ ಕಲಾವಿದರು.

ಮೇಘಾ ಭಟ್ ನಿರ್ದೇಶನದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಶಿಕ್ಷಕಿಯರ ತಂಡದಿಂದ ಪ್ರಾರಂಭಿಕ ಗೀತೆಯಾಗಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಮೂಡಿಬಂದಾಗ ಕಲಾಪ್ರೇಮಿಗಳು ಎದ್ದು ನಿಂತು ಶತಮಾನದ ಹಾಡಿಗೆ ಗೌರವ ಸೂಚಿಸಿದರು. ವೇದಿಕೆಯಲ್ಲಿ ಹೆಸರಾಂತ ಕಲಾವಿದ ಬಿ.ಆರ್.ಸತೀಶ್ ಅವರು ಭುವನೇಶ್ವರಿಯ ಚಿತ್ರ ಬಿಡಿಸುವ ಮೂಲಕ ಮೆರುಗು ಹೆಚ್ಚಿಸಿದರು.

ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಚಂದ್ರಶೇಖರ್ ಎಸ್.ವಿ ( ಎಲ್ಲಾದರು ಇರು ಎಂತಾದರು ಇರು) , ಕೆ.ಎಸ್. ಧನಂಜಯ (ಕಾಣದ ಕಡಲಿಗೆ ಹಂಬಲಿಸಿದೆ ಮನ), ಬಸವರಾಜು ( ನಾವಾಡುವ ನುಡಿಯೇ ಕನ್ನಡ ನುಡಿ.) ಮಲ್ಲಪ್ಪ ಮುಸಿಗಿರಿ ( ಜೇನಿನ ಹೊಳೆಯೋ.. ಹಾಲಿನ . ಮಳೆಯೋ) , ಎಸ್. ಮಂಜುನಾಥ್. (ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು), ಪೊನ್ನಂಪೇಟೆಯ ಶೋಭಾ ಶ್ರೀನಿವಾಸ್ ( ಕೇಳಿಸದೇ ಕಲ್ಲು ಕಲ್ಲಿನಲಿ),, ಎಚ್.ಎಸ್. ಸುಧೀರ್ (ಕರುನಾಡ ತಾಯೆ ಸದಾ ಚಿನ್ಮಯಿ ) ವಿರಾಜಪೇಟೆಯ ಮೋಹನ್ ಟಿ.ಡಿ. ಮತ್ತು ಸುಪ್ರಿತಾ ದಿಲೀಪ್ ( ನೀ ಮೀಟಿದ ನೆನಪೆಲ್ಲವು) ಕೃಷ್ಣವೇಣಿ ಮುಳಿಯ ( ಇನ್ನಷ್ಟು ಬೇಕೆನಗೆ ರಾಮ), ಮಡಿಕೇರಿಯ ಮೆಹೆಖ್ ಫಾತಿಮ ( ಇನ್ನೂ ಯಾಕ ಬರಲಿಲ್ಲ.. ಹುಬ್ಬಳ್ಳಿಯಂವ), ಸೋಮವಾರಪೇಟೆಯ ಜನಾರ್ದನ್ ( ಕಣಕಣ ದೇ ಶಾರದೆ), ಮಡಿಕೇರಿಯ ಜಿ.ಎನ್. ಶ್ರೀಹರಿ ರಾವ್ ( ಭಲೆ ಭಲೇ ಚೆಂದದ ಚೆಂದುಳ್ಳಿ) ಸೋಮವಾರಪೇಟೆಯ ಎಸ್.ಎ.ಮುರಳೀಧರ್ ( ಬಂಗಾರ ನೀರ ಕಡಲಾಚೆಗಿದೆ) ಮಡಿಕೇರಿಯ ಸಂಧ್ಯಾ ಚಿದ್ವಿಲಾಸ್, ಅಲೆಮಾಡ ಚಿತ್ರಾ ನಂಜಪ್ಪ, ವಂದನಾ ಪೊನ್ನಪ್ಪ ( ಹೂವು ಹೊರಳುವುದು ಸೂಯ೯ನ ಕಡೆಗೆ), ಯುವಗಾಯಕಿ ಮಡಿಕೇರಿಯ ಸಪ್ನಾ ಮಧುಕರ್ ( ನಗು ಎಂದಿದೆ.. ಹೂವಿನ ಬಿಂದು), ವಿರಾಜಪೇಟೆಯ ಅಜಿತ್ ಪೂವಣ್ಣ ( ಹಾಡೊಂದು ನಾ ಹಾಡುವೆನು), ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ತಂಡ (ಮಣ್ಣಲ್ಲಿ ಬಿದ್ದೋನು..), ಮಡಿಕೇರಿಯ ಮಲಿಹಾ ಫಾತಿಮ ( ರೆಂಬೆ ಕೊಂಬೆ ಮೇಲೆ..), ಮಡಿಕೇರಿಯ ಜಿ. ಚಿದ್ವಿಲಾಸ್ ( ಕೋಡಗನ ಕೋಳಿ ನುಂಗಿತ್ತಾ.), ಕುಶಾಲನಗರದ ಲೋಕೇಶ್ ಸಾಗರ್ ( ಇದೇ ನಾಡು.. ಇದೇ ಭಾಷೆ), ವಿರಾಜಪೇಟೆಯ ಸುಪ್ರೀತಾ ದಿಲೀಪ್ ( ಹೂವಿನ ಬಾಣದಂತೆ ಮೂಲಹಾಡು) ಮಡಿಕೇರಿಯ ಶೃತಿ ಲಯ ತಂಡ (ತೇರ ಏರಿ ಅಂಬರದಾಗೆ), ಬಾಳೆಲೆಯ ಅನ್ವಿತ್ ಕುಮಾರ್ ಸಿ.ವಿ. ( ಬೊಂಬೆ ಹೇಳುತೈತೆ..), ಸಮರ್ಥ ಕನ್ನಡಿಗರು ಸಂಸ್ಥೆ ( ಕೂಡಿ ಬಾಳೋಣ.. ಎಂದೆಂದೂ ಸೇರಿ ದುಡಿಯೋಣ), ಸೋಮವಾರಪೇಟೆಯ ಥೆರೇಸಾ ( ನಗಿಸಲು ನೀನು.. ನಗುವೆನು ನಾನು.), ಮಡಿಕೇರಿಯ . ರವಿ ಪಿ.ಮತ್ತು ಮಮತಾ ( ನಿಮ್ ಕಡೆ ಸಾಂಬಾರಂದ್ರೆ ), ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ಯಿಂದ ಸಮೂಹ ಗೀತೆ - ಜೋಗದ ಸಿರಿ ಬೆಳಕಿನಲಿ, ತಿತಿಮತಿಯ ಯುವಗಾಯಕಿ ಪಿ. ಹೇಮಾ ( ಕೃಷ್ಣ ನೀ ಬೇಗನೆ ಬಾರೋ..), ಮಡಿಕೇರಿಯ ಟಿ. ಕೆ. ಸುಧೀರ್ ( ಎಲ್ಲಿರುವೆ ಮನವ ಕಾಡುವ ರೂಪಸಿಯೇ.) ಸೋಮವಾರಪೇಟೆಯ ಪುರುಷೋತ್ತಮ್, ( ಒಳಿತು ಮಾಡು ಮನುಷ್ಯ ), ಶರ್ಮಿಳಾ ರಮೇಶ್ ಸೋಮವಾರಪೇಟೆ (ನೀನಿಲ್ಲದೆ ನನಗೇನಿದ), ಮಡಿಕೇರಿಯ ಟಿ.ಜೆ. ಪ್ರವೀಣ್ ಕುಮಾರ್, ( ಚೆಲ್ಲಿದರು ಮಲ್ಲಿಗೆಯ) ಗಾಯತ್ರಿ ಚೆರಿಯಮನೆ ( ಆಕಾಶದಾಗೆ ಯಾರೋ ಮಾಯಗಾರನು.) ಹಾಡುಗಳು ಮನಸೆಳೆದವು.

ಗೀತಗಾಯನ ಕಾರ್ಯಕ್ರಮಕ್ಕೆ ಕಲಾಪ್ರೇಮಿಗಳ ಸ್ಪಂದನ ಉತ್ತಮವಾಗಿತ್ತು, ಸಭಾಂಗಣ ಕಿಕ್ಕಿರಿಯುವಂತೆ ಸಭಿಕರು ಹಾಜರಿದ್ದು ಹಾಡುಗಳಿಗೆ ಚಪ್ಪಾಳೆ, ಶಿಳ್ಳೆ ಮೂಲಕ ಮೆಚ್ಚುಗೆ ಸೂಚಿಸಿ ಇಂಥ ಕಾರ್ಯಕ್ರಮಗಳ ಅಗತ್ಯತೆಯನ್ನು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?