ರಾಜ್ಯಮಟ್ಟದ ವಧು-ವರರ ಸಮಾವೇಶ ಉದ್ಘಾಟಿಸಿದ ಸಂಸದ
ವೀರಶೈವ- ಲಿಂಗಾಯತ ಹಾಗೂ ಅದರ ಎಲ್ಲ ಒಳಪಂಗಡಗಳವರು ಒಗ್ಗಟ್ಟಾಗಬೇಕು. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಅದಕ್ಕೆ ಅಗತ್ಯ ಒತ್ತಡ ಹೇರಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಭಾನುವಾರ ನಗರದ ಅಮರಗೋಳ ಎಪಿಎಂಸಿ ಆವರಣದ ವಸ್ತು ಸಂಗ್ರಹಾಲಯದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ತಾಲೂಕು ಘಟಕ ಹಾಗೂ ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಧು-ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ನಮ್ಮ ಸಮಾಜದಲ್ಲಿ ಒಗ್ಗಟ್ಟು ಇಲ್ಲದಿದ್ದರೆ ರವಿ ಹಂಜಗಿಮಠ ಅವರಂತಹವರು ಸಂಶೋಧನೆಯ ಹೆಸರಿನಲ್ಲಿ ಸವಾರಿ ಮಾಡುತ್ತಾರೆ. ಇಂತಹ ಬೆಳವಣಿಗೆಗಳನ್ನು ಎಂದಿಗೂ ಸಹಿಸಬಾರದು. ಜಗತ್ತಿಗೆ ಮೊದಲು ಅನುಭವ ಮಂಟಪದ ಮೂಲಕ ಸಂಸತ್ತಿನ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಎಲ್ಲ ವರ್ಗದವರನ್ನು ಸಮಾನವಾಗಿ ಕಂಡು ಮಹಿಳೆಯರಿಗೂ ಅವಕಾಶ ಕಲ್ಪಿಸಿದ್ದರು. ಇದೇ ಆಶಯದಡಿ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಜಾರಿಗೆ ತರುತ್ತಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಣಜಿಗ ಸಮಾಜದವರು ಒಂದಾಗಲು ಇಂತಹ ವೇದಿಕೆಗಳನ್ನು ನಿರಂತರವಾಗಿ ಕಲ್ಪಿಸಬೇಕು. ಪ್ರಸ್ತುತ ವಧು-ವರರು ಸಿಗುವುದೇ ಕಷ್ಟವಾಗುತ್ತಿದೆ. ಇಂತಹ ಸಾಮಾಜಿಕ ಕಾರ್ಯ ಶ್ಲಾಘನೀಯ. ವರದಕ್ಷಿಣೆ ಪಿಡುಗು ನಿವಾರಿಸುವ ಪ್ರಯತ್ನ ನಮ್ಮ ಸಮಾಜದಿಂದಲೇ ಆರಂಭವಾಗಬೇಕು ಎಂದರು.
ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಾನಂದ ಕವಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಲೆಕ್ಕಪರಿಶೋಧಕ ಚನ್ನವೀರ ಮುಂಗರವಾಡಿ ಮಾತನಾಡಿದರು. ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಗುರುಪಾದಪ್ಪ ಶಿರೂರ ಅಧ್ಯಕ್ಷತೆ ವಹಿಸಿದ್ದರು.