- ₹4.10 ಕೋಟಿ ಮೀಸಲಿಟ್ಟರೂ ಯೋಜನೆಗೆ ಸಿಗದ ವೇಗ
- 82 ವಾರ್ಡ್‌ಗಳಿಗೆ ತಲಾ ಒಂದರಂತೆ ಆಟೋ ವಿತರಿಸುವ ಗುರಿಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಮಹಿಳೆಯರ ಸುರಕ್ಷಿತ ಸಂಚಾರ, ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶದ ಕನಸು ಹೊತ್ತು ಹು-ಧಾ ಮಹಾನಗರ ಪಾಲಿಕೆ ರೂಪಿಸಿದ ಪಿಂಕ್ ಆಟೋ ಯೋಜನೆಗೆ ನಾರಿಯರಿಂದಲೇ ನಿರಾಸಕ್ತಿ ವ್ಯಕ್ತವಾಗುತ್ತಿದೆ. ಮಹಿಳೆಯರಿಗೆ ಉಚಿತವಾಗಿ ಆಟೋ ವಿತರಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಣೆಯಾಗಿ 8-9 ತಿಂಗಳು ಕಳೆದರೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ₹4.10 ಕೋಟಿ ಮೀಸಲಿಟ್ಟು 82 ವಾರ್ಡ್‌ಗಳಿಗೆ ತಲಾ ಒಂದರಂತೆ ಆಟೋ ನೀಡಲು ಮುಂದಾಗಿರುವ ಪಾಲಿಕೆಗೆ ಈವರೆಗೆ ಸಿಕ್ಕಿರುವುದು ಕೇವಲ 9 ಅರ್ಜಿಗಳು.
ಉಚಿತ ಆಟೋ, ಆದರೆ ಚಾಲಕರಿಲ್ಲ:
ವಿಶೇಷವಾಗಿ ಆಟೋ ಚಾಲನಾ ಪರವಾನಗಿ ಪಡೆಯುವುದೇ ಮಹಿಳೆಯರಿಗೆ ಆರಂಭಿಕ ಸವಾಲಾಗಿದೆ. ಹುಬ್ಬಳ್ಳಿಯಲ್ಲಿ ಮಹಿಳಾ ಆಟೋ ಚಾಲಕರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಹೊಸದಾಗಿ ಮಹಿಳೆಯರನ್ನು ಈ ವೃತ್ತಿಗೆ ಕರೆತರುವುದು ಸುಲಭದ ಕೆಲಸವಾಗಿಲ್ಲ. ಹೀಗಾಗಿ, ಆಟೋ ನೀಡುವುದಕ್ಕಿಂತ ಮೊದಲು ಮಹಿಳಾ ಚಾಲಕರನ್ನು ಸಿದ್ಧಪಡಿಸುವ ಅಗತ್ಯವೂ ಇದೆ.
ಮಹಿಳಾ ಸಬಲೀಕರಣದ ಆಶಯದ ಯೋಜನೆಗೆ ಮಹಿಳೆಯರೇ ಮುಂದೆ ಬರದಿರುವುದರ ಹಿಂದಿನ ಕಾರಣವನ್ನು ಪಾಲಿಕೆ ಗಂಭೀರವಾಗಿ ಪರಿಶೀಲಿಸಬೇಕಿದೆ. ಕೇವಲ ಜಾಹೀರಾತು, ಪ್ರಚಾರಕ್ಕೆ ಸೀಮಿತವಾಗದೆ ಚಾಲನಾ ತರಬೇತಿ, ಲೈಸೆನ್ಸ್ ವ್ಯವಸ್ಥೆ ಹಾಗೂ ಕುಟುಂಬಗಳ ಮನವೊಲಿಕೆಗೆ ಮುಂದಾದರೆ ಮಾತ್ರ ಪಿಂಕ್ ಆಟೋ ಯೋಜನೆಗೆ ವೇಗ ಸಿಗಬಹುದು.
ಪಾಲಿಕೆಗೆ ಈವರೆಗೆ ಒಟ್ಟು 9 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಇಬ್ಬರು ಮಹಿಳೆಯರಿಗೆ ಪೂರ್ಣ ಪ್ರಮಾಣದ ಚಾಲನಾ ಪರವಾನಗಿ ದೊರೆತಿಲ್ಲ. ಹೀಗಾಗಿ, ಅವರ ಅರ್ಜಿಗಳ ಪ್ರಕ್ರಿಯೆ ಬಾಕಿಯಿದೆ. ಅರ್ಜಿ ಸಲ್ಲಿಸಲು ಇನ್ನೂ ಕೆಲವು ದಿನ ಕಾಲಾವಕಾಶ ನೀಡಲಾಗುವುದು. ವಿವಿಧ ಸಂಘ-ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿದರೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವ ವಿಶ್ವಾಸವಿದೆ ಎಂದು ಮೇಯರ್ ದುರ್ಗಮ್ಮ ಬಿಜವಾಡ "ಕನ್ನಡಪ್ರಭ "ಕ್ಕೆ ತಿಳಿಸಿದರು.
ಶೇಖರಯ್ಯ ಮಠಪತಿ, ಉತ್ತರ ಕರ್ನಾಟಕ ಆಟೋ ಚಾಲಕ ಸಂಘದ ರಾಜ್ಯಾಧ್ಯಕ್ಷ