ವಿವಿಧ ಕಾರಣದಿಂದಾಗಿ ನಮ್ಮ ಮಧ್ಯೆ ಅನಾಥರು, ಬೀದಿಗೆ ಬಿದ್ದ ಪಾಲಕರು, ಅಶಕ್ತರು, ಅಸಹಾಯಕರು, ಶೋಷಿತರು, ತುಳಿತಕ್ಕೆ ಒಳಗಾದವರು, ನಿರ್ಗತಿಕರು ಇದ್ದಾರೆ. ಇಂಥವರಿಗೆ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಧೈರ್ಯ ಹೇಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು.
ಹುಬ್ಬಳ್ಳಿ:
ಸಮಾಜದಲ್ಲಿನ ಅಶಕ್ತರು, ಅಸಹಾಯಕರು, ಅನಾಥರು, ಅಬಲೆಯರ ಕಣ್ಣೀರು ಒರೆಸಿ, ಆರೈಕೆ ಮತ್ತು ಆಸರೆ ನೀಡುವ ಮಾನವೀಯ ಸೇವೆ ಮಾಡುವ ಕೈಗಳು ಇನ್ನಷ್ಟು ಹೆಚ್ಚಬೇಕಿದೆ ಎಂದು ಶಿರಹಟ್ಟಿ ಸಂಸ್ಥಾನ ಮಠದ ಫಕೀರ ಸಿದ್ಧರಾಮ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಬೈರಿದೇವರಕೊಪ್ಪ ವ್ಯಾಪ್ತಿಯ ವೀರಸಂಗೊಳ್ಳಿ ರಾಯಣ್ಣ ನಗರದಲ್ಲಿ ಭಾನುವಾರ ಬೆಳಕು ವೇದಿಕೆ ಆಯೋಜಿಸಿದ್ದ ತುಲಾಭಾರ, ಸ್ಮರಣೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಮಾನವೀಯ ಸೇವೆಗೈದ 10 ಜನ ಮಹನೀಯರಿಗೆ ಗೌರವ ಸಲ್ಲಿಸುವ "ಋಣ ಸಂದಾಯ " ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿವಿಧ ಕಾರಣದಿಂದಾಗಿ ನಮ್ಮ ಮಧ್ಯೆ ಅನಾಥರು, ಬೀದಿಗೆ ಬಿದ್ದ ಪಾಲಕರು, ಅಶಕ್ತರು, ಅಸಹಾಯಕರು, ಶೋಷಿತರು, ತುಳಿತಕ್ಕೆ ಒಳಗಾದವರು, ನಿರ್ಗತಿಕರು ಇದ್ದಾರೆ. ಇಂಥವರಿಗೆ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಧೈರ್ಯ ಹೇಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಆಸರೆ ನೀಡಿ, ಪ್ರೀತಿಯಿಂದ ಅವರ ಸೇವೆ ಮಾಡಬೇಕು. ಅದುವೇ ನಿಜವಾದ ದೇವರ ಸೇವೆ ಎಂದು ಮಾರ್ಮಿಕವಾಗಿ ನುಡಿದರು.
ವಿವಿಧ ಕ್ಷೇತ್ರದಲ್ಲಿ ಅಪಾರವಾದ ಮಾನವೀಯ ಸೇವೆ ಮಾಡಿ ಈ ಸಮಾಜಕ್ಕೆ ಮಾದರಿಯಾಗಿರುವ ಮಹನೀಯರನ್ನು ಬೆಳಕು ವೇದಿಕೆ ಇಂದು ಗುರುತಿಸಿ ಗೌರವಿಸಿದ್ದು, ಇನ್ನುಳಿದವರಿಗೆ ಅವರ ಸೇವೆ ಪ್ರೇರಣೆಯಾಗಲಿದೆ. ಸಮಾಜದ ಇಂಥ ಪ್ರೋತ್ಸಾಹವೂ ಅವರಿಗೆ ಇಂದು ಅತ್ಯಗತ್ಯವಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರಿನ ನಿವೃತ್ತ ಶಿಕ್ಷಕ ಚಕ್ರವರ್ತಿ ಶ್ರೀಧರ್, ನಾವು ಸಂಗ್ರಹಿಸುವ ಸಂಪತ್ತು ನಮ್ಮದಲ್ಲ. ಅದರ ಕಾವಲುಗಾರರು ಮಾತ್ರ ನಾವು, ಅದನ್ನು ಸಮಾಜಕ್ಕೆ ಸದ್ವಿನಿಯೋಗ ಮಾಡುವ ಬಹು ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಯಾರಿಗೆ ಅದು ಅಗತ್ಯವಿದೆಯೋ ಅವರನ್ನು ಗುರುತಿಸಿ, ಅವರಿಗೆ ಅರ್ಪಿಸಿ ಧನ್ಯತೆ ಪಡೆಯಬೇಕು. ಆ ದಿಸೆಯಲ್ಲಿ ಈ ಕಾರ್ಯಕ್ರಮ ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸಿದೆ ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ನಾವು ನಮ್ಮ ವೃತ್ತಿ, ಮನೆ-ಮಕ್ಕಳು ಎನ್ನುವ ಜಂಜಡದಲ್ಲಿ ಮುಳುಗಿ ನಮ್ಮ ಮೇಲಿರುವ ಹಲವು ರೀತಿಯ ಋಣಗಳನ್ನು ಮರೆತಿರುತ್ತೇವೆ. ನೇರವಾಗಿ ಆ ಋಣ ತೀರಿಸಲಾಗದೇ ಅಸಹಾಯಕರಾಗಿರುತ್ತೇವೆ. ಈ ಸಮಾಜಕ್ಕೆ ತಮ್ಮ ಬದುಕನ್ನೇ ಅರ್ಪಿಸಿರುವ ಸಾಧಕರನ್ನು ಗುರುತಿಸಿ, ಗೌರವಿಸುವ ಮೂಲಕ ತುಸುವಾದರೂ ಋಣ ಸಂದಾಯ ಮಾಡಬೇಕು. ಆ ದಿಸೆಯಲ್ಲಿ ಈ ಕಾರ್ಯಕ್ರಮ ಮಾದರಿ ಎಂದರು.
ಸನ್ಮಾನ ಸ್ವೀಕರಿಸಿದ ಅಥಣಿಯ ವಿಮೋಚನ ಸಂಸ್ಥೆಯ ಬಿ.ಎಲ್. ಪಾಟೀಲ್, ಅನಾಥರು, ಅಶಕ್ತರು, ಶೋಷಿತರ ಸೇವೆ ಉಪಕಾರವಲ್ಲ, ಅದು ನಮ್ಮ ಕರ್ತವ್ಯ. ಎಲ್ಲ ಸೌಲಭ್ಯ, ಸಂಪತ್ತು ಇರುವವರು ಅದರಲ್ಲಿನ ಒಂದಷ್ಟು ಭಾಗವನ್ನು ಸಮಾಜಕ್ಕೆ ಅರ್ಪಿಸಲು ಇಂಥ ಸೇವೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡಬೇಕು ಎಂದು ಕರೆ ನೀಡಿದರು.
ಬಾಗಲಕೋಟೆಯ ಘನಶ್ಯಾಮ ಭಾಂಡಗೆ ಅವರು, ಸಕಲ ಜೀವಿಗಳಲ್ಲಿ ದೇವರಿದ್ದಾನೆ. ಬೀದಿ ನಾಯಿ, ಬಿಡಾಡಿ ದನಗಳಿಗೂ ಈ ಭೂಮಿಯ ಮೆಲೆ ಬದುಕುವ ಹಕ್ಕಿದೆ. ಮನುಷ್ಯರಂತೆ ಅವುಗಳನ್ನು ಕಾಣಿ. ತುಸು ಆಹಾರ-ನೀರು ಹಾಕಿ ಪ್ರೀತಿ ತೋರಿಸಿದರೆ, ಅವು ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತವೆ ಎಂದರು.
ವಿವಿಧ ಕ್ಷೇತ್ರದಲ್ಲಿ ಮಾನವೀಯ ಸೇವಗೈದ ಅಥಣಿಯ ಬಿ.ಎಲ್.ಪಾಟೀಲ್ (ದೇವದಾಸಿ ಮಕ್ಕಳ ಪುನಃರ್ವಸತಿ), ಕೊಪ್ಪಳ ಜಿಲ್ಲೆ ಕುಣಕೇರಿಯ ಹುಚ್ಚಮ್ಮ ಚೌಧರಿ (ಸರ್ಕಾರಿ ಶಾಲೆಗೆ ಭೂದಾನ), ನವನಗರದ ಸಂಜೈ ವಾಸು ಕುನ್ನಾಥ್ (ಎಚ್ಐವಿ ಪೀಡಿತ ಮಕ್ಕಳ ಪೋಷಕ), ವಿಜಯನಗರ ಜಿಲ್ಲೆ ಕೂಡ್ಲಗಿಯ ಭಟ್ರಳ್ಳಿ ಗೂಳೆಪ್ಪ (ಅರಣ್ಯ ಸಂರಕ್ಷಣೆ), ಉಡುಪಿಯ ತನುಲಾ ತರುಣ (ಅನಾಥ ಮಕ್ಕಳ ಸಂರಕ್ಷಕಿ), ಬಾಗಲಕೋಟೆಯ ಘನಶಾಮ ಭಾಂಡಗೆ (ವಿಕಲಚೇತನರ ಹೋರಾಟಗಾರ), ಯಾದಗಿರಿ ಜಿಲ್ಲೆ ದೊಡ್ಡ ತಾಂಡಾದ ತುಳಜಾರಾಮ ಚವ್ಹಾಣ (ವಿದೇಶದಿಂದ ಮರಳಿ ಊರಿನ ಸೇವೆ ಮಾಡಿದ ಸಾಧಕ), ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಮಾಳಮ್ಮ (ಮಹಿಳಾ ಸಬಲೀಕಣ), ನುಗ್ಗಿಕೇರಿಯ ನಿಂಗಪ್ಪ ಕುಡವಕ್ಕಲಿಗರ (ಗಾಯಾಳು ಆಪದ್ಭಾಂದವ), ಅಥಣಿಯ ಬಸವರಾಜ ಉಮರಾಣಿ, (ನಡೆದಾಡುವ ಕಂಪ್ಯೂಟರ್) ಅವರನ್ನು ಸನ್ಮಾನಿಸಲಾಯಿತು.
ಶ್ರೀಗಳ ತುಲಾಭಾರ ಮತ್ತು ಆದರ್ಶ ದಂಪತಿ ದಿವಂಗತ ಬಸವಣ್ಣೆವ್ವ ಕೋಂ ಬಸಪ್ಪ ರುದ್ದರಪ್ಪ ವಿರಪಣ್ಣವರ ಅವರ ಸ್ಮರಣೋತ್ಸವ ಜರುಗಿತು.
ಬೆಳಕು ವೇದಿಕೆಯ ಆರ್.ಬಿ.ವಿರಪಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಮೋಟಗಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಕುರಬೆಟ್ಟ ವಂದಿಸಿದರು.
ಕಾಲನಿಯ ಗಣ್ಯರಾದ ಆರ್.ಶಿವಣ್ಣ, ಶಿ.ಎಸ್.ಹವಾಲ್ದಾರ, ಕೃಷ್ಣಾ ಶೆಟ್ಟಿ, ವಿ.ಎಸ್.ಆಲೂರ, ಸೂಗೂರಪ್ಪ ಲಕ್ಷ್ಮೇಶ್ವರ, ವೆಂಕಟೇಶ ಪಾಟೀಲ್, ವಿರಪಣ್ಣವರ ಮನೆತನದ ಶಿವಪ್ಪ, ಗಂಗಪ್ಪ, ಚೆನ್ನಪ್ಪ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.