ಧಾರವಾಡ:
ಹೋರಾಟದ ಭಾಗವಾಗಿ ಸೋಮವಾರ ಪು-ಧಾ ಪೂರ್ವ ಶಾಸಕ ಅಬ್ಬಯ್ಯ ಪ್ರಸಾದ ಬೆಂಬಲ ಸೂಚಿಸಿ, ಶಾಂತಿಯುತ ಹೋರಾಟಕ್ಕೆ ಸಹಮತವಿದೆ. ನಮ್ಮ ಸರ್ಕಾರದದಿಂದ ಅನುಮೋದನೆಗೊಂಡ ಕಡತ ಕಳೆದ ಒಂದು ವರ್ಷದಿಂದ ರಾಜ್ಯಪಾಲರ ಕಚೇರಿಯಲ್ಲಿದೆ. ಈಗಾಗಲೇ ನಾವು ನಿಯೋಗದೊಂದಿಗೆ ಅವರನ್ನು ಭೇಟಿ ಮಾಡಿದ್ದು, ಕೂಡಲೇ ಕಡತ ಅನುಮೋದನೆಗೆ ಕೋರಿದ್ದೇವೆ. ಇದು ಕೇವಲ ಭಾವನಾತ್ಮಕ ವಿಚಾರವಲ್ಲ. ಅವಳಿ ನಗರಗಳ ಬೆಳವಣಿಗೆ, ಆಡಳಿತಾತ್ಮಕವಾಗಿ ಜನರಿಗೆ ಉತ್ತಮ ಸೇವೆ ಕೊಡಲು ಮತ್ತು ಎರಡೂ ನಗರಗಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಮಾಡಿರುವ ಅಚಲ ನಿರ್ಧಾರ ಎಂದರು. ಸೋಮವಾರ ಹೋರಾಟಕ್ಕೆ ವಿಶ್ವಕರ್ಮ ಸಮಾಜದಿಂದ ಬೆಂಬಲ ನೀಡಲಾಯಿತು. ಧಾರವಾಡ ನಗರದ ಅಭಿವೃದ್ಧಿಗೆ, ಮೂಲಭೂತ ಸೌಕರ್ಯ ಒದಗಿಸುವ ಉದ್ದೇಶದಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲು ಸಮಸ್ತ ಸಮಾಜದ ಜನರು ಹೋರಾಟದ ಜೊತೆಗಿದ್ದಾರೆ ಎಂದು ಸಮಾಜದ ಮುಖಂಡರಾದ ವಸಂತ ಅರ್ಕಾಚಾರ, ನಿರಂಜನ ಬಡಿಗೇರ, ಎಂ.ಬಿ. ಬಡಿಗೇರ, ಗುರುನಾಥ ಪಟ್ಟಣಕೋಡಿ, ಕಾಳಪ್ಪ ಬಡಿಗೇರ, ಎಮ್.ಬಿ. ಬಡಿಗೇರ, ರತ್ನಾಕರ ನೇಗಿನಹಾಳ ಬೆಂಬಲಿಸಿದರು. ಎಂದಿನಂತೆ ಹೋರಾಟಗಾರರು ವೇದಿಕೆಯಲ್ಲಿದ್ದರು.
ಪ್ರತ್ಯೇಕ ಪಾಲಿಕೆಗಾಗಿ ಅಹೋರಾತ್ರಿ ಹೋರಾಟಕಳೆದ 11 ದಿನಗಳಿಂದ ಇಲ್ಲಿಯ ಪಾಲಿಕೆ ಕಚೇರಿ ಬಳಿ ಪ್ರತ್ಯೇಕ ಪಾಲಿಕೆಗಾಗಿ ನಡೆಯುತ್ತಿದ್ದ ಹೋರಾಟ ಆಮರಣಾಂತ ಉಪವಾಸಕ್ಕೆ ಬಂದು ನಿಂತಿದೆ. ತರಹೇವಾರಿ ಹೋರಾಟ ನಡೆಸಿದ ಬಿ.ಡಿ. ಹಿರೇಮಠ ನೇತೃತ್ವದ ಹೋರಾಟ ಸಮಿತಿ ಸೋಮವಾರದಿಂದ ಅಹೋರಾತ್ರಿ ಹೋರಾಟಕ್ಕೆ ಕುಳಿತಿದ್ದಾರೆ. ಅವರೊಂದಿಗೆ ಸುಮಾರು ಹತ್ತು ಜನರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ಮೇ 29ರಂದು ಬೈಕ್ ರ್‍ಯಾಲಿ ಹಾಗೂ ಮೇ 30ರಂದು ಧಾರವಾಡ ಬಂದ್ ಮಾಡುವುದು ಖಚಿತ ಎಂದು ಹೋರಾಟಗಾರರು ತಿಳಿಸಿದರು.