ಹಗರಿಬೊಮ್ಮನಹಳ್ಳಿ: ಪದವೀಧರರಿಗೆ ಮುಂದಿನ ಶಿಕ್ಷಣ ಮತ್ತು ಉದ್ಯೋಗ ಕುರಿತು ಮಾಹಿತಿಯ ಕೊರತೆ ಇದೆ. ಪರಿಣಾಮವಾಗಿ ಸಾಕಷ್ಟು ಪದವೀಧರರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಶಾಸಕ ನೇಮರಾಜ್ ನಾಯ್ಕ ಕಳವಳ ವ್ಯಕ್ತಪಡಿಸಿದರು.
ನಾನಾ ಅವಕಾಶಗಳಿಂದ ವಂಚಿತರಾಗುತ್ತಿರುವ ಪದವೀಧರರನ್ನು ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅವರಿಗೆ ಸಮಗ್ರ ಮಾರ್ಗದರ್ಶನ ಒದಗಿಸುವ ಕಾರ್ಯಾಗಾರ ನಡೆಸಲು ಸರಕಾರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಪದವೀಧರರ ಶೈಕ್ಷಣಿಕ ಚಟುವಟಿಕೆಗಳು ಪಠ್ಯಕ್ಕೆ ಸೀಮಿತವಾಗದೇ ವಿಸ್ತಾರವಾಗಬೇಕು. ಜ್ಞಾನದ ಹರಿವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಅಧ್ಯಯನಶೀಲರಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿಯೇ ಸಾಕಷ್ಟು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂಬ ಕಿವಿಮಾತು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜ್‌ನ ಪ್ರಾಂಶುಪಾಲರಾದ ಎಸ್.ಕೆ.ಬಸವರಾಜ ಮಾತನಾಡಿ, ಎಷ್ಟೋ ವರ್ಷಗಳ ಹಿಂದೆ ಅಕ್ಷರ ಕಲಿಯದ ವಚನಕಾರರು, ತತ್ವಪದಕಾರರು ಬಹುದೊಡ್ಡ ಸಾಮಾಜಿಕ ಪರಿವರ್ತನೆ ನಡೆಸಿರುವಾಗ ಪದವೀಧರರು ಪದವಿ ಮುಗಿಯುತ್ತಿದ್ದಂತೆಯೇ ನಿಮ್ಮ ಜ್ಞಾನದ ಮೂಸೆಯಲ್ಲಿ ಕಿರಿಯರನ್ನು ವೈಚಾರಿಕವಾಗಿ ಸಾಣೆ ಹಿಡಿಯುವ ಚಳುವಳಿಗೆ ಒಡ್ಡಿಕೊಳ್ಳಬೇಕು ಎಂದು ಆಶಿಸಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಜಿವಿಪಿಪಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವನ್ನು ಶಾಸಕ ಕೆ.ನೇಮಿರಾಜ್ ನಾಯ್ಕ್ ಉದ್ಘಾಟಿಸಿದರು. ಪ್ರಾಂಶುಪಾಲರಾದ ಎಸ್.ಕೆ.ಬಸವರಾಜ ಮತ್ತಿತರರಿದ್ದರು.