ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಂಘ ಪರಿವಾರವನ್ನು ಸಮಾಧಾನಪಡಿಸುವ ರಾಜಕೀಯ ಉದ್ದೇಶದಿಂದ ಸಮಾಜದಲ್ಲಿ ದ್ವೇಷ, ಅಶಾಂತಿ ಹಾಗೂ ಕೋಮು ಪ್ರಚೋದನೆಗೆ ಕಾರಣರಾದವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹಿಂಪಡೆಯಲು ನಿರ್ಧರಿಸಿದೆ.
ಹುಬ್ಬಳ್ಳಿ:
ಕೋಮುವಾದಿ ಶಕ್ತಿಗಳ ಮೇಲಿನ ಪ್ರಕರಣ ಹಿಂಪಡೆಯುವ ನಿರ್ಧಾರ ರದ್ದುಪಡಿಸಲು ಒತ್ತಾಯಿಸಿ ಸೋಮವಾರ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಂಘ ಪರಿವಾರವನ್ನು ಸಮಾಧಾನಪಡಿಸುವ ರಾಜಕೀಯ ಉದ್ದೇಶದಿಂದ ಇತ್ತೀಚಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಸಮಾಜದಲ್ಲಿ ದ್ವೇಷ, ಅಶಾಂತಿ ಹಾಗೂ ಕೋಮು ಪ್ರಚೋದನೆಗೆ ಕಾರಣರಾದವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ಹಿಂಪಡೆಯಲು ನಿರ್ಧರಿಸಿದೆ. ಈ ನಿರ್ಧಾರವು ರಾಜ್ಯದ ಜನತಂತ್ರ, ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲಿನ ನೇರ ದಾಳಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಸಮಾಜದಲ್ಲಿ ನಿರಂತರವಾಗಿ ದ್ವೇಷ ಭಾಷಣ ಮಾಡಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವುದು, ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ವಿಷಕಾರಿ ಹೇಳಿಕೆ ನೀಡಿ ಸಾಮಾಜಿಕ ಸಾಮರಸ್ಯ ಹಾಳು ಮಾಡುವವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುತ್ತಿರುವುದು ಕಾನೂನಿನ ಮೇಲಿನ ಜನರ ನಂಬಿಕೆ ಕುಸಿಯುವಂತೆ ಮಾಡುತ್ತಿದೆ. ಕಾನೂನು ಎಲ್ಲರಿಗೂ ಸಮಾನ ಎಂದು ಹೇಳಿಕೊಳ್ಳುವ ಸರ್ಕಾರವೇ ಸಮಾಜಘಾತುಕ ಶಕ್ತಿಗಳಿಗೆ ರಾಜಕೀಯ ರಕ್ಷಣೆ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಎಸ್‌ಡಿಪಿಐ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಸಲೀಂ ಅರಳಿಕಟ್ಟಿ ಸೇರಿದಂತೆ ಹಲವು ಎಸ್‌ಡಿಪಿಐ ಕಾರ್ಯಕರ್ತರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.