ಕನ್ನಡಪ್ರಭ ವಾರ್ತೆ, ತುಮಕೂರುಗ್ರಾಮೀಣ ಪ್ರದೇಶದ ಪೌರಾಣಿಕ ನಾಟಕಗಳು ಯುವ ಪೀಳಿಗೆಗಳಲ್ಲಿ ಧಾರ್ಮಿಕ ಚಿಂತನೆಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ. ಪೌರಾಣಿಕ ನಾಟಕಗಳು ಹಳ್ಳಿಗಾಡಿನಲ್ಲಿ ಹಬ್ಬದ ವಾತಾವರಣವನ್ನು ಮೂಡಿಸುವ ಜತೆಗೆ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಮಚಂದ್ರಯ್ಯ ಹೇಳಿದರು. ತಾಲೂಕಿನ ಗೂಳೂರು ಹೋಬಳಿ ಸಾಸಲು ಗ್ರಾಮದಲ್ಲಿ ಅಭಿನಯ ರಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನ ಹಾಗೂ ರಂಗಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಸಲು ಗ್ರಾಮದ ಸಮಾಜ ಸೇವಕ ಮತ್ತು ಪೌರಾಣಿಕ ನಾಟಕ ಕಲಾವಿದರಾದ ಎಸ್.ಜಿ. ನರಸಿಂಹಮೂರ್ತಿ ರವರಿಗೆ ನೀಡುವ 2026ನೇ ಸಾಲಿನ ರಂಗಮಿತ್ರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಕುರುಕ್ಷೇತ್ರ ನಾಟಕ ಪ್ರದರ್ಶನ ಉದ್ಘಾಟಿಸಿದ ಬಿ.ಎಂ. ಗೋಪಾಲಯ್ಯ ಮಾತನಾಡಿ, ಅಭಿನಯ ರಂಗ ಕೇಂದ್ರದವರ ಈ ಕಾರ್ಯ ಶ್ಲಾಘನೀಯ. ಪ್ರತಿ ಹಳ್ಳಿಯಲ್ಲಿ ಪ್ರತಿಭೆಗಳನ್ನು ಹುಡುಕಿ ಅವರಿಗೆ ನಾಟಕ ತರಬೇತಿಗಳನ್ನು ಮಾಡಿ ಪ್ರತಿಭೆಗಳನ್ನು ಗುರುತಿಸಿ ರಂಗಮಿತ್ರ ಪ್ರಶಸ್ತಿ ನೀಡುತ್ತಾ ಬಂದಿರುವುದು ದೊಡ್ಡ ಸಾಧನೆಯ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಅಭಿನಯ ರಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವಥ್‌ನಾರಾಯಣ ಅವರು, ಅಭಿನಯ ರಂಗ ಕೇಂದ್ರ ಈಗಾಗಲೇ ಗ್ರಾಮೀಣ ಪ್ರದೇಶದ ಕಲಾವಿದರಿಗೆ ರಂಗ ತರಬೇತಿ ಶಿಬಿರಗಳು, ನಾಟಕ ಸ್ಪರ್ಧೆಗಳು ಹಾಗೂ ಶಾಲಾ ಮಕ್ಕಳಿಗೆ ನಾಟಕದ ವಿಚಾರಗಳನ್ನು ಶಿಕ್ಷಣದ ಮೂಲಕ ರಂಗಭೂಮಿ ಎನ್ನುವ ಕಲ್ಪನೆಯನ್ನು ಇಟ್ಟುಕೊಂಡು ಮಕ್ಕಳಲ್ಲಿ ಸಾಂಸ್ಕೃತಿಕವಾಗಿ ಹೆಚ್ಚು ವಿಚಾರಗಳನ್ನು ತಿಳಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು. ಕಳೆದ ೧೯ ವರ್ಷಗಳಿಂದಲೂ ನಿರಂತರವಾಗಿ ತುಮಕೂರು ಜಿಲ್ಲೆಯಲ್ಲಿ ರಂಗ ಭೂಮಿ ಕೆಲಸ ಮಾಡುತ್ತಾ ಬಂದಿದ್ದೇವೆ. ರಂಗ ತರಬೇತಿ ಶಿಬಿರಗಳು, ನಾಟಕ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿರುವುದರ ಜತೆಯಲ್ಲಿ ಗ್ರಾಮೀಣ ಪ್ರದೇಶದ ಕಲಾವಿದರಿಗೆ ರಂಗಮಿತ್ರ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಅಭಿನಯ ರಂಗ ಕೇಂದ್ರದ ಈ ಚಟುವಟಿಕೆಗಳಿಗೆ ಜನರ ಸಹಕಾರ ಬಹು ಮುಖ್ಯವಾಗಿದೆ ಎಂದು ಅವರು ತಿಳಿಸಿದರು. ನಂತರ ಕುರುಕ್ಷೇತ್ರ ನಾಟಕದ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಅಭಿನಯ ರಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವಥ್‌ನಾರಾಯಣ, ಲಕ್ಷ್ಮೀಕಾಂತ್, ಮುನಿರಾಜು, ರವಿಗೌಡ, ಸಿದ್ದೇಗೌಡ, ಕೆಂಪಯ್ಯ, ಪಿ.ಸಿ. ಜೈ ಕುಮಾರ್, ಬಸವರಾಜ್ ಐನಾಪುರ ಮತ್ತಿತರರು ಉಪಸ್ಥಿತರಿದ್ದರು.