ಹೆಣ್ಣು ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ಮನೆ ಬೆಳಗಲಿ

KannadaprabhaNewsNetwork |  
Published : Jan 01, 2026, 04:00 AM IST
 | Kannada Prabha

ಸಾರಾಂಶ

ಹೆಣ್ಣು ಮಕ್ಕಳು ಭಗವಂತನ ನಾಮಸ್ಮರಣೆ ಮಾಡಿ, ಮಕ್ಕಳಿಗೆ ಆಧ್ಯಾತ್ಮಿಕ-ಧಾರ್ಮಿಕ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿ ಅವರನ್ನು ಸುಂಸ್ಕೃತರನ್ನಾಗಿ ಮಾಡುವುದರ ಮೂಲಕ ಈ ದೇಶಕ್ಕೆ ಎರಡು ಒಳ್ಳೆಯ ಮಕ್ಕಳನ್ನು ಕೊಡುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿ ಎಂದು ಮೈಸೂರಿನ ಸಂಸ್ಕೃತ ಚಿಂತಕರಾದ ಡಾ.ನಾಗಮಣಿ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹೆಣ್ಣು ತಾಯಿಯಾಗುವುದು ಆ ಭಗವಂತ ಕೊಟ್ಟ ವರ, ಈ ಅವಕಾಶವನ್ನು ಹೆಣ್ಣು ಮಾತ್ರ ಅನುಭವಿಸಲು ಸಾಧ್ಯ. ಆ ಹೆಣ್ಣು ಮನೆ ಮಗಳಾಗಿ, ಸೊಸೆಯಾಗಿ ಹಾಗೂ ತಾಯಿಯಾಗಿ ಮನೆ ಬೆಳಗಬೇಕು. ಇದು ನಮ್ಮ ಭಾರತೀಯ ಸಂಸ್ಕೃತಿ ಎಂದು ಮೈಸೂರಿನ ಸಂಸ್ಕೃತ ಚಿಂತಕರು ಪ್ರೊ.ಡಾ.ನಾಗಮಣಿ ಖಂಡ್ರೆ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ 3ನೇ ವರ್ಷದ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಆಧ್ಯಾತ್ಮ ಮತ್ತು ಮಹಿಳೆ ಎಂಬ ವಿಷಯದ ಕುರಿತು ಅವರು ಅನುಭಾವ ನುಡಿಗಳನ್ನಾಡಿದರು. ತಾಯಿಯಾಗುವ ಅವಕಾಶವನ್ನು ಈ ಸೃಷ್ಠಿ ಕೇವಲ ಹೆಣ್ಣು ಮಕ್ಕಳಿಗೆ ಕೊಟ್ಟಿದೆ. ಪುರುಷರು ತಾಯಿಯಾಗಲು ಸಾಧ್ಯವೇ ಇಲ್ಲ. ಮಹಿಳೆ ತಾಯಿಯಾಗಿ ಮಗುವಿಗೆ ಹಾಲು ಕೊಡುತ್ತೇವೆ. ಆ ಹಾಲಿನಲ್ಲಿ ಕೇವಲ ಆಹಾರ ಇರಲ್ಲ ನಮ್ಮ ಉನ್ನತ ಸಂಸ್ಕೃತಿ ಇದೆ. ಶೌರ್ಯ, ಸಾಹಸ ದೇಶ ಭಕ್ತಿಯಂತಹ ಗುಣಗಳನ್ನು ನಾವು ಆ ಎದೆ ಹಾಲಿನ ಮೂಲಕ ನೀಡುತ್ತೆವೆ ಎನ್ನುವುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಜ್ಞಾನವೇ ಸಂಪತ್ತು, ಜ್ಞಾನವೇ ಬಂಗಾರ ಎಂದು ಪುಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನಮಗೆ ನೀಡಿ ಹೋಗಿದ್ದಾರೆ. ಆಧ್ಯಾತ್ಮದಲ್ಲಿ ಮಹಿಳೆ ತನ್ನನ್ನು ತೊಡಗಿಸಿಕೊಂಡರೆ ಇಡೀ ಕುಟುಂಬವೇ ಸುಂದರ, ಬದುಕು ಬಂಗಾರವಾಗುತ್ತದೆ ಎನ್ನುವುದನ್ನು ಶ್ರೀ ಸಿದ್ದೇಶ್ವರ ಅಪ್ಪಗಳು ನಮಗೆ ತಿಳಿಸಿದ್ದಾರೆ. ನಾವು ಅವರ ಮಾತುಗಳನ್ನು ಪಾಲಿಸಬೇಕು ಎಂದರು.

ಕಲಬುರಗಿಯ ಗ್ರಂಥಿ ಶಾಸ್ತ್ರಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ಇಂದು ಕುಟುಂಬದಲ್ಲಿ ಅಪ್ಪ-ಅಮ್ಮ ಇಬ್ಬರಿಗೂ ಆಧ್ಯಾತ್ಮದ ಅವಶ್ಯಕತೆ ಇದೆ. ಮಹಿಳೆಯನ್ನು ಹೊರತುಪಡಿಸಿ ಆಧ್ಯಾತ್ಮವಿಲ್ಲ. ನಾವೆಲ್ಲರೂ ಅರಿವಿನಿಂದ ಬದುಕಲು ಶ್ರೀ ಸಿದ್ದೇಶ್ವರ ಅಪ್ಪಗಳು ನಮ್ಮನ್ನು ಜ್ಞಾನಯೋಗಾಶ್ರಮ ಪುಣ್ಯ ಭೂಮಿಯಲ್ಲಿ ಸೇರಿಸಿದ್ದಾರೆ ಎಂದರು.

ಬುರಣಾಪುರ ಶ್ರೀ ಸಿದ್ಧಾರೂಢ ಮಠದ ಮಾತೋಶ್ರೀ ಯೊಗೇಶ್ವರಿ ಮಾತಾಜಿ ಆಶೀರ್ವಚನ ನೀಡಿ, ಮಹಿಳೆ ಮತ್ತು ಆಧ್ಯಾತ್ಮ ಎನ್ನುವುದು ನಮ್ಮ ಜಿಲ್ಲೆಗೆ ಹೊಸದಲ್ಲ ಯಾಕೆಂದರೆ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಗಳು ನಮಗೆಲ್ಲ ಇದನ್ನು ಹೇಳಿ ಕೊಟ್ಟಿದ್ದಾರೆ. ರವಿವಾರಕ್ಕೊಮ್ಮೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಆಧ್ಯಾತ್ಮ ಕೇಂದ್ರ ಆಶ್ರಮಗಳಿಗೆ ಕರೆದುಕೊಂಡು ಹೋಗಬೇಕು. ನಾವು ಆಧ್ಯಾತ್ಮದ ರೂಢಿ ಮಾಡಿಕೊಳ್ಳಬೇಕು. ರೂಢಿಯಿಂದ ಕುಟುಂಬ ಬದಲಾಗುತ್ತದೆ, ಸಮಾಜ ಬದಲಾಗುತ್ತದೆ. ಭಾರತದ ಪರಂಪರೆ ಬೆಳಗುತ್ತದೆ ಎಂದರು.

ಗದಗ ಕದಳಿ ಬನದ ಮಾತೋಶ್ರೀ ಅಕ್ಕಮಹಾದೇವಿ ಮಾತಾಜಿ ಆರ್ಶೀವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ರಾಷ್ಟ್ರ ಸಂತರು. ಆತ್ಮ ಸಂಬಂಧಿ ವಿಷಯವನ್ನು ಅರಿತುಕೊಳ್ಳುವುದೇ ಆಧ್ಯಾತ್ಮ. ಮಕ್ಕಳು ಎಂದರೆ ನಮ್ಮ ಆತ್ಮ ಇದ್ದಂತೆ, ದೇಹ ಮಿತ್ಯಾತ್ಮ, ಬ್ರಹ್ಮ ಎನ್ನುವುದು ಮುಖ್ಯಾತ್ಮ ಧರ್ಮವನ್ನು ಉಳಿಸಲು ನಿಂತವರನ್ನು ಆಧ್ಯಾತ್ಮ ಚಿಂತಕರು ಎನ್ನುತ್ತಾರೆ ಎಂದರು.

ಈ ವೇಳೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಪೂಜ್ಯ ಬಸವಲಿಂಗ ಸ್ವಾಮೀಜಿ, ಮಹಿಳಾ ಸಾಧಕಿಯರು, ನಾಡಿನ ಪೂಜ್ಯರು ಹಾಗೂ ಜ್ಞಾನಯೋಗಾಶ್ರಮದ ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ