ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೆಂಪೇಗೌಡರ ಜಯಂತಿ ಪ್ರಯುಕ್ತ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ವರ್ಣ ರಂಜಿತ ರಥದಲ್ಲಿ ಮೆರವಣಿಗೆ ಆಯೋಜಿಸಲಾಗುವುದು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಾಗಾಸೆ ಸೇರಿದಂತೆ ವಿವಿಧ ಕಾಲಾ ತಂಡಗಳು ಭಾಗವಹಿಸುವ ವ್ಯವಸ್ಥೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಬ್ಬರು ಮಹನೀಯರ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜೂನ್ 4ರಂದು ನಾಲ್ವಡಿ ಹಾಗೂ ಜೂ.27ರಂದು ಕೆಂಪೇಗೌಡರ ಜಯಂತಿ ನಡೆಯಲಿದೆ ಎಂದರು.
ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಜಿಲ್ಲಾಡಳಿತದಿಂದ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 11 ಗಂಟೆಗೆ ಕಲಾ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಂಡ್ಯ ಜಿಲ್ಲೆಗೆ ನಾಲ್ವಡಿ ಅವರ ಕೊಡುಗೆ ತಿಳಿಸಲು ವಿಶೇಷ ಉಪನ್ಯಾಸ ಆಯೋಜಿಸಿ ಎಂದರು.
ಜೂನ್ 27 ರಂದು ಕೆಂಪೇಗೌಡರ ಜಯಂತಿಯಯನ್ನು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಬೆಳಗ್ಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೆಂಪೇಗೌಡರ ಜಯಂತಿ ಪ್ರಯುಕ್ತ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ವರ್ಣ ರಂಜಿತ ರಥದಲ್ಲಿ ಮೆರವಣಿಗೆ ಆಯೋಜಿಸಲಾಗುವುದು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಾಗಾಸೆ ಸೇರಿದಂತೆ ವಿವಿಧ ಕಾಲಾ ತಂಡಗಳು ಭಾಗವಹಿಸುವ ವ್ಯವಸ್ಥೆ ಮಾಡಬೇಕು. ಇದರ ಜೊತೆಗೆ ಪೂರ್ಣಕುಂಭ ಹೊತ್ತ ಮಹಿಳೆಯರು ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.
ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟು ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಮಹನೀಯರ ಭಾವಚಿತ್ರವನ್ನು ಇರಿಸಿ ಪುಷ್ಪಾರ್ಚನೆ ಸಲ್ಲಿಸಿ ನಂತರ ಮೆರವಣಿಗೆಯು ಕಲಾ ಮಂದಿರದವರೆಗೆ ವಿಜೃಂಭಣೆಯಿಂದ ಸಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ, ಉಪನ್ಯಾಸಕರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ವಿಶೇಷ ಉಪನ್ಯಾಸ ನಡೆಸಲಾಗುವುದು ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗುವುದು ಎಂದರು.
ಮಹಾನ್ ವ್ಯಕ್ತಿಗಳು ಸಮಾಜಕ್ಕೆ ನೀಡಿದ ಕೊಡುಗೆಗಳು, ಅವರು ಪಾಲಿಸಿದ ತತ್ವ ಹಾಗೂ ಆದರ್ಶಗಳನ್ನು ಸಾರ್ವಜನಿಕರಿಗೆ ತಿಳಿಸಲು ಸರ್ಕಾರ ಜಯಂತಿ ಆಚರಿಸುತ್ತದೆ. ಜನರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಸಹಕಾರ ನೀಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ನಿರ್ಮಲ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಕೃಷ್ಣ, ಸೌಭಾಗ್ಯ, ರಮೇಶ್ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.