ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರ । ದಾರಿ ಕಾಣದೆ ಹಳ್ಳ, ಉಪ ನದಿಗೆ ಇಳಿದ ಕಾರುಗಳು । ಹಲವೆಡೆ ಧರೆಗುರುಳಿದ ವಿದ್ಯುತ್ ಕಂಬಗಳು । ಮಲೆನಾಡಿನಲ್ಲಿ ಜನ ಜೀವನ ಅಸ್ತವ್ಯಸ್ಥ,
ಮಳೆಯ ಆರ್ಭಟಕ್ಕೆ ಕಾಫಿ ನಾಡು ತತ್ತರಿಸುತ್ತಿದೆ. ಬಲವಾಗಿ ಬೀಸುತ್ತಿರುವ ಗಾಳಿಗೆ ಮರ, ವಿದ್ಯುತ್ ಕಂಬಗಳು ಧರೆ ಗುರುಳುತ್ತಿವೆ. ಮಲೆನಾಡಿನ ಮಂದಿ ಮನೆಯಿಂದ ಹೊರಗೆ ಬರಲು ಭಯಭೀತರಾಗಿದ್ದಾರೆ. ಭಾನುವಾರ ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಆಟೋ ಚಾಲನೆ ಮಾಡುತ್ತಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಸ್ತೆ ಕಾಣದೆ ಎರಡು ಕಾರುಗಳು ಸಮೀಪದ ಹಳ್ಳ ಹಾಗೂ ಉಪ ನದಿಗೆ ಬಿದ್ದಿವೆ.
ಕೊಪ್ಪ ತಾಲೂಕಿನ ಭೈರೆದೇವರು ಗ್ರಾಮದ ಶಿಡ್ಲೆಮನೆ ವಾಸಿಯಾದ ಆಟೋ ಚಾಲಕ ರತ್ನಾಕರ ಹೆಗ್ಡೆ (45 ವರ್ಷ ) ಭಾನುವಾರ ಮಧ್ಯಾಹ್ನ 1.30ರ ವೇಳೆಗೆ ಜನಗಳನ್ನು ಕೊಗ್ರೆಗೆ ಬಿಟ್ಟು ವಾಪಸ್ ಗಡಿಕಲ್ ಆಟೋ ಸ್ಟ್ಯಾಂಡ್ ಬರುವಾಗ ಮಾರ್ಗ ಮಧ್ಯೆ ಬೃಹತ್ ಮರ ಆಟೋ ಮೇಲೆ ಬಿದ್ದ ಪರಿಣಾಮ ಅವರು ಆಟೋದಲ್ಲೇ ಮೃತಪಟ್ಟಿದ್ದಾರೆ.ಮೂಡಿಗೆರೆ ತಾಲೂಕಿನ ಬಣಕಲ್ ಹಾಗೂ ಚಕ್ಕಮಕ್ಕಿ ಗ್ರಾಮದ ಬಳಿ ಒಂದು ಕಾರು ಹಳ್ಳಕ್ಕೆ ಬಿದ್ದಿದ್ದರೆ ಮತ್ತೊಂದು ಕಾರು ಹೇಮಾವತಿ ನದಿಯ ಉಪ ನದಿಗೆ ಬಿದ್ದಿದ್ದೆ. ಸ್ಥಳೀಯರು ಕಾರನ್ನು ಹೊರ ತೆಗೆದಿದ್ದಾರೆ. ಕಾರಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.
ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲೂ ತುಂತುರು ಮಳೆ ಬಂದಿದ್ದರೆ, ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹಾಗೂ ಲಕ್ಕವಳ್ಳಿ ಹೋಬಳಿಯಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲೂ ಕಳೆದ ಮೂರು ದಿನ ಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ನಗರ ಪ್ರದೇಶದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ಹಲವೆಡೆ ನೀರು ಹರಿ ಯುತ್ತಿತ್ತು. ಬಿಡುವಿಲ್ಲದೆ ಮಳೆ ಬರುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ.
ತಾಲೂಕಿನಲ್ಲಿ ಹರಿಯುವ ಹೇಮಾವತಿ ಸೇರಿದಂತೆ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದೆ. ವಿದ್ಯುತ್ ಪೂರೈಕೆಯಿಲ್ಲದೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ಟವರ್‌ಗಳು ಸ್ಥಗಿತಗೊಂಡಿದೆ. ಮೊಬೈಲ್ ಚಾರ್ಜ್ ಮಾಡಲು ಸಾಧ್ಯವಾಗದೆ ಗ್ರಾಮೀಣ ಪ್ರದೇಶದ ಬಹುತೇಕ ಮೊಬೈಲ್ ಸ್ವಿಚ್ ಆಫ್ ಆಗಿವೆ. ಗ್ರಾಮೀಣ ಭಾಗದಲ್ಲಿ ಮಳೆಯಿಂದ ಅನಾಹುತ ಸಂಭವಿಸಿದರೆ ತುರ್ತು ಕರೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುದಾಗಿದೆ.
ಸಬ್ಲಿ ಶಾಲಾ ರಂಗಮಂದಿರದ ಮೇಲ್ಛಾವಣಿ ಹಾರಿ ಹೋಗಿದ್ದು ಗೋಡೆ ಬಿರುಕು ಬಿಟ್ಟಿದೆ. ಜಾವಳಿ, ಬಾಳೂರು, ನಿಡುವಾಳೆ ಭಾಗದಲ್ಲಿ ಅಲ್ಲಲ್ಲಿ ಮರಗಳು ಧರೆಗುರುಳಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
--- 25 ಕೆಸಿಕೆಎಂ 3ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದ ಬಳಿ ಹಳ್ಳಕ್ಕೆ ಇಳಿದ ಕಾರ್‌ವನ್ನು ಸ್ಥಳೀಯರು ಹೊರಗೆ ತೆಗೆದರು.