ಹಾನಗಲ್ಲ: ಜಲಮೂಲಗಳ ಪುನಶ್ಚೇತನಕ್ಕೆ ಸಾಮಾಜಿಕ ಸಂಘ, ಸಂಸ್ಥೆಗಳ ಜತೆಗೆ ರೈತರು, ಸಾರ್ವಜನಿಕರು ಸಹ ಕೈ ಜೋಡಿಸಿದರೆ ಅಂತರ್ಜಲದ ಮಟ್ಟವೂ ಸುಧಾರಣೆ ಕಂಡು ಜಲಕ್ಷಾಮ ಅಪಾಯಗಳನ್ನು ತಡೆಯಬಹುದಾಗಿದೆಯಲ್ಲದೆ ನೀರಿನ ಕೊರತೆ ಇಲ್ಲದೆ ಸುಗಮ ಜೀವನ ಸಾಧ್ಯವಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಬಾಳಿಹಳ್ಳಿ ಗ್ರಾಮದಲ್ಲಿ ಶಿರಸಿಯ ಮನುವಿಕಾಸ ಸಂಸ್ಥೆಯಿಂದ ಬಕ್ಕಟಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೆರೆಗಳ ಸಂರಕ್ಷಣೆ ಬಗ್ಗೆ ಸಮುದಾಯದಲ್ಲಿ ಜಾಗೃತಿ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಕೆರೆಗಳು ನಿಧಾನವಾಗಿ ಹೂಳು ತುಂಬಿ ಕಾಲಗರ್ಭ ಸೇರುತ್ತಿವೆ. ಪೂರ್ವಜರು ಗ್ರಾಮಕ್ಕೊಂದು ಕೆರೆ ನಿರ್ಮಿಸಿರುವುದರಿಂದ ಹಿಂದೆ ವೈಜ್ಞಾನಿಕ ಅಂಶ ಅಡಗಿದೆ ಎಂದರು.
ನೀರು ನಿತ್ಯ ಬದುಕಿಗೆ ಅತ್ಯವಶ್ಯಕವಾಗಿ ಬೇಕಾಗಿರುವಂತಹದ್ದು. ಆದರೆ ಅದನ್ನು ಉಳಿಸಿಕೊಂಡು ಬಳಸಿಕೊಳ್ಳುವ ಇಚ್ಛಾಶಕ್ತಿ ತೋರಬೇಕು. ನಮ್ಮ ಜಲಮೂಲಗಳನ್ನು ಸುರಕ್ಷಿತವಾಗಿಟ್ಟುಕೊಂಡು ನಾಳಿನ ಪೀಳಿಗೆಗೆ ಉಳಿಸಬೇಕಾಗಿದೆ. ಕೃಷಿ ಕ್ಷೇತ್ರದ ಉಳಿವಿಗೆ ಜಲಮೂಲಗಳೇ ಶಕ್ತಿ. ಇದರೊಂದಿಗೆ ಅಂತರ್ಜಲ ತುಂಬುವ ಕೆಲಸವೂ ಆಗಬೇಕು. ಇರುವ ನೀರನ್ನು ವ್ಯರ್ಥವಾಗದಂತೆ ಬಳಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.ಮನುವಿಕಾಸ ಸಂಸ್ಥೆಯ ಅಶ್ವತ್ಥ ನಾಯ್ಕ ಮಾತನಾಡಿ, ನೀರಾವರಿ ಕೆರೆಗಳು ರೈತರ ಜೀವನಾಡಿಯಾಗಿವೆ. ಕೆರೆಗಳನ್ನು ರೈತರಿಗಾಗಿ ಉಳಿಸಿಕೊಳ್ಳುವ ಮಹತ್ಕಾರ್ಯಕ್ಕೆ ಎಲ್ಲರೂ ಒತ್ತು ನೀಡೋಣ. ನೀರಿಲ್ಲದೆ ರೈತರು ಕೃಷಿ ಚಟುವಟಿಕೆಗೆ ಹೋಗಲಾರರು. ಮಳೆ ನೀರನ್ನು ಸಂಗ್ರಹಿಸಿ ಅದರ ಸದುಪಯೋಗಕ್ಕೆ ಮುಂದಾಗುವ ಜತೆಗೆ ಜಲಾಗಾರಗಳನ್ನು ರೈತರ ಹಿತಕ್ಕೆ ಸಮರ್ಪಕವಾಗಿ ಉಳಿಸಿಕೊಳ್ಳುವ ಕಾರ್ಯ ಈಗ ಬೇಕಾಗಿದೆ. ಮಳೆಗಾಲದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯ ಅತಿ ಅವಶ್ಯವಿದೆ ಎಂದರು. ಗ್ರಾಪಂ ಸದಸ್ಯ ಜಗದೀಶ ಈರಣ್ಣನವರ, ಪ್ರಮುಖರಾದ ಬಸಣ್ಣ ತರವಂದ, ಮಹೇಶ ವಾಸನದ, ಶ್ರೀಧರ ಸಾವಿಕೇರಿ, ಕುಮಾರ ಮಡಿವಾಳ, ಮಂಜುನಾಥ ಕೋಡೇರ, ರಾಜಪ್ಪ ಸಾಗರವಳ್ಳಿ, ಯಲ್ಲಪ್ಪ ಅರಳೇಶ್ವರ, ಶಿವಪ್ಪ ಬೈಚವಳ್ಳಿ, ಭೀಮಣ್ಣ ತಳವಾರ, ಪರಶುರಾಮ ತಳವಾರ, ರಾಜೂ ಗಾಡಗೇರ, ಮೆಹಬೂಬಅಲಿ ಹೊಂಡದ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಕೆರೆ ಬಳಕೆದಾರರು ಉಪಸ್ಥಿತರಿದ್ದರು.