ಹೋಬಳಿ ಮಟ್ಟದಲ್ಲಿ ಅರ್ಜಿ ಸ್ವೀಕಾರ । ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ
ಮೂವತ್ತು ವರ್ಷದಿಂದ ಸರ್ಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಜೀವ್ನ ಮಾಡ್ತಾ ಇದ್ದಿವಿ. ಪಂಚಾಯ್ತಿಗೆ ಹೋಗಿ ಅರ್ಜಿ ಕೊಟ್ಟು ಸುಸ್ತಾಗಿದೆ, ನಮ್ಮೂರಿಗೆ ಬಂದೀರಿ ಗೇಣು ಜಾಗ ಕೊಟ್ರ ನಿಮಗೆ ಪುಣ್ಯ ಬರತೈತಿ ಎಂದು ಕೊರವರ ದೇವಕ್ಕ ಜಿಲ್ಲಾಧಿಕಾರಿ ಮುಂದೆ ನೋವು ತೊಡಿಕೊಂಡ ಪರಿ ಇದು.
ಹೌದು, ತಾಲೂಕಿನ ಹಿರೇಹಡಗಲಿ ಹೋಬಳಿ ಕೇಂದ್ರದ ನಾಡ ಕಚೇರಿಯಲ್ಲಿ ಜನರ ಕುಂದು-ಕೊರತೆ ಆಲಿಸಲು ಬಂದಿದ್ದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮುಂದೆ, ಹಿರೇಹಡಗಲಿ ಗ್ರಾಮದ ಮಹಿಳೆ ಕೊರವರ ದೇವಕ್ಕ, ಮನೆಯಲ್ಲಿ ಅನಾರೋಗ್ಯದಿಂದ ಮಗ ಬಳಲುತ್ತಿದ್ದಾನೆ, ಗಂಡ ತೀರಿ ಹೋಗಿದ್ದಾನೆ, ನಮಗೆ ದಿಕ್ಕೇ ಕಾಣುತ್ತಿಲ್ಲ, ಗ್ರಾಮದ ಸರ್ಕಾರಿ ಜಾಗ ಮಂಜೂರು ಮಾಡಿ ಎಂದು ಕನಿಕರದಿಂದ ಬೇಡಿಕೊಂಡಳು.ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಹಿರೇಹಡಗಲಿ ಪಂಚಾಯಿತಿಯಲ್ಲಿ ಈಗಾಗಲೇ ನಿವೇಶನ ರಹಿತ ಹಾಗೂ ಮನೆ ಇಲ್ಲದವರ ಪಟ್ಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ನಿಮಗೆ ನಿವೇಶನ ನೀಡುತ್ತೇವೆಂದು ಭರವಸೆ ನೀಡಿದರು.
ಪ್ರತಿಯೊಬ್ಬರೂ ಸಮಸ್ಯೆ ಪಟ್ಟಿ ಹಿಡಿದುಕೊಂಡು, ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ, ನಾವೇ ಹಳ್ಳಿಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುತ್ತಿದ್ದೇವೆ. ಕೆಲ ಅರ್ಜಿಗಳನ್ನು ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿ ವಿಲೇವಾರಿ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ನಿವೇಶನ ಮತ್ತು ಸರ್ಕಾರಿ ಮನೆಗಳ ಅರ್ಜಿ ಸಲ್ಲಿಕೆಯಾಗಿವೆ. ಉಳಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧ ಪಟ್ಟ ಅರ್ಜಿಗಳನ್ನು ರವಾನೆ ಮಾಡಲಾಗುತ್ತದೆ ಎಂದರು.
ಅಂಗೂರು ಗ್ರಾಮದ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆ ಹಳ್ಳ ಹಿಡಿದು ಹೋಗಿದೆ. ಹೆಸರಿಗೆ ಯೋಜನೆಯಾಗಿದ್ದು, ಈವರೆಗೂ ಒಂದು ಹನಿ ನೀರು ಕಾಲುವೆಗೆ ಹರಿಯುತ್ತಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ, ಜತೆಗೆ ಭೂ ಸ್ವಾಧೀನ ಮಾಡಿಕೊಂಡ ಭೂಮಿ ಪರಿಹಾರ ನೀಡಿಲ್ಲ. ಈ ಕುರಿತು ಕೂಡಲೇ ಕ್ರಮ ವಹಿಸಿ, ರೈತರ ಜಮೀನುಗಳಿಗೆ ನೀರುಣಿಸಬೇಕೆಂದು ಒತ್ತಾಯಿಸಿದರು.
ಹಿರೇಹಡಗಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ, ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವ ಜನರೇ ಹೆಚ್ಚು ಆದರೆ, ಇಲ್ಲಿ ಸಾಕಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿನ ಸೌಲಭ್ಯ ಮತ್ತು ವೈದ್ಯರ ಶ್ರಮದಿಂದ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ, ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.
ತುಂಗಭದ್ರಾ ನದಿ ತೀರದ ಮರಳಿನ ಸ್ಟಾಕ್‌ಯಾರ್ಡ್‌ಗಳ ಟೆಂಡರ್ ಆನ್‌ಲೈನ್‌ನಲ್ಲಿ ಕರೆಯಲಾಗಿದೆ. ಶೀಘ್ರದಲ್ಲೇ ಪ್ರಕ್ರಿಯೆ ಮುಗಿಸಿ ಕ್ರಮಕ್ಕೆ ಮುಂದಾಗುತ್ತೇವೆಂದು ಹೇಳಿದರು.