ನಾಡಿನುದ್ದಕ್ಕೂ ಬುದ್ಧನ ಬೆಳಕು ಹರಡಲಿ: ಜಯನ್ ಮಲ್ಪೆ

KannadaprabhaNewsNetwork | Published : May 15, 2025 1:57 AM
Follow Us

ಸಾರಾಂಶ

ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ೨೫೬೯ನೇ ವೈಶಾಖ ಪೂರ್ಣಿಮೆಯ ಬುದ್ಧ ಜಯಂತಿ ಆಚರಿಸಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಬುದ್ಧನ ತತ್ವ ಆದರ್ಶಗಳು ಪ್ರಜ್ಞೆ, ಶೀಲ, ಕರುಣೆಯಿಂದ ಕೂಡಿದೆ. ಈ ಕಾರಣಕ್ಕಾಗಿ ಬೌದ್ಧ ಧರ್ಮವು ಜಗತ್ತಿಗೆ ಶಾಂತಿ, ಸಮಾನತೆ, ಸಹೋದರತೆ ಬಿತ್ತುವ ಶಕ್ತಿ ಹೊಂದಿದೆ. ಇವತ್ತಿನ ಎಲ್ಲ ತಲ್ಲಣಗಳಿಗೆ ಉತ್ತರವಾಗಿ ನಾಡಿನುದ್ದಕ್ಕೂ ಬುದ್ಧನ ಬೆಳಕು ಹರಡಬೇಕಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.ಅವರು ಸೋಮವಾರ ಇಲ್ಲಿನ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ೨೫೬೯ನೇ ವೈಶಾಖ ಪೂರ್ಣಿಮೆಯ ಬುದ್ಧ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿ ನಡೆಯುತ್ತಿದೆ. ನಮಗೆ ಮಾನವ ಜನಾಂಗದ ಎದುರಿಗೆ ಇರುವ ಬುದ್ಧ ಮತ್ತು ಯುದ್ಧ ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾದ ಅನಿವಾರ‍್ಯತೆ ಎದುರಾಗಿದೆ. ಜೀವ ಜಗತ್ತಿನ ಬಗ್ಗೆ ಕಿಂಚಿತ್ತಾದರೂ ಪ್ರೀತಿಯುಳ್ಳ ಮನುಷ್ಯ ವರ್ಗವು ಬುದ್ಧನನ್ನು ಮತ್ತು ಬುದ್ಧನ ವಿಚಾರಗಳನ್ನು ಅಪ್ಪಿಕೊಳ್ಳದೇ ಬೇರೆ ದಾರಿ ಕಾಣುವುದಿಲ್ಲ. ಬುದ್ದನ ಶಾಂತಿ ಮಂತ್ರವೇ ಭೂಮಿಯ ಮೇಲಿನ ಜೀವಸಂಕುಲದ ಉಳಿವಿಗೆ ರಕ್ಷಾ ಕವಚವಾಗಬಲ್ಲದು ಎಂದರು.

ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಸಮಕಾಲೀನ ಜಾಗತಿಕ ಘಟನೆಗಳಿಗೆ, ಹಿಂಸೆಯ ಪ್ರಚೋದನೆ, ಭಯೋತ್ಪಾದನೆ, ಬ್ರಷ್ಟಾಚಾರ, ಅನೈತಿಕ ರಾಜಕಾರಣ, ಕೋಮುದ್ವೇಷ ಮುಂತಾದವುಗಳಿಗೆ ಪ್ರತಿರೋಧ ಒಡ್ಡಲು ಬುದ್ಧನನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಅಂಬೇಡ್ಕರ್ ಯುವಸೇನೆಯ ಸ್ಥಾಪಕಾಧ್ಯಕ್ಷ ಹರೀಶ್ ಸಾಲ್ಯಾನ್, ದಲಿತ ಮುಖಂಡರಾದ ದಯಾಕರ ಮಲ್ಪೆ, ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಗುಣವಂತ ತೊಟ್ಟಂ, ದೀಪಕ್ ಕೊಡವೂರು, ಸತೀಶ್ ಕಪ್ಪೆಟ್ಟು, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಅರುಣ್ ಸಲ್ಯಾನ್, ನವೀನ್ ಬನ್ನಂಜೆ ಮುಂತಾದವರು ಉಪಸ್ಥಿತರಿದ್ದರು.ಸಮಾರಂಭದ ಬಳಿಕ ಮಲ್ಪೆ ಸುತ್ತಮುತ್ತಲಿನ ದಲಿತ ಕಾಲೋನಿಯ ನೂರಾರು ಮಂದಿ ಗೌತಮಬುದ್ಧನಿಗೆ ಹೂವು ಗುಚ್ಚ ಅರ್ಪಿಸಿ ವಂದನೆ ಸಲ್ಲಿಸಿದರು.

ವಿನಯ ಕೊಡಂಕೂರು ಸ್ವಾಗತಿಸಿದರು. ಸಂತೋಷ್ ಮೂಡುಬೆಟ್ಟು ವಂದಿಸಿದರು.