ಕೇಂದ್ರ ಹಣ ನೀಡದ ಕಾರಣವೈದ್ಯರಿಗೆ ವೇತನ ವಿಳಂಬ : ರಾಜ್ಯ ಸರ್ಕಾರದ ಸ್ಪಷ್ಟನೆ

KannadaprabhaNewsNetwork | Updated : May 15 2025, 06:14 AM IST
Follow Us

ಸಾರಾಂಶ

 ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗೆ ವೇತನ ಪಾವತಿ ಬಾಕಿ ಉಳಿದಿದೆ. ಕೇಂದ್ರದಿಂದ ಅನುದಾನ ಬಿಡುಗಡೆಯಾಗದ ಕಾರಣ ಈ ರೀತಿ ಸಮಸ್ಯೆಯಾಗಿದೆ. 2-3 ದಿನದಲ್ಲಿ ವೇತನ ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

 ಬೆಂಗಳೂರು : ಕೇಂದ್ರದ ಅನುದಾನ ಪಾವತಿ ವಿಳಂಬದಿಂದ ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗೆ ವೇತನ ಪಾವತಿ ಬಾಕಿ ಉಳಿದಿದೆ. ಕೇಂದ್ರದಿಂದ ಅನುದಾನ ಬಿಡುಗಡೆಯಾಗದ ಕಾರಣ ಈ ರೀತಿ ಸಮಸ್ಯೆಯಾಗಿದೆ. 2-3 ದಿನದಲ್ಲಿ ವೇತನ ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

ಎನ್‌ಎಚ್‌ಎಂ ಅಡಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 30,000 ಸಿಬ್ಬಂದಿಗೆ ಕಳೆದ ಎರಡೂವರೆ ತಿಂಗಳಿಂದ ವೇತನ ಪಾವತಿಯಾಗಿಲ್ಲ. ಮೇ 20ಕ್ಕೆ ವೇತನವಿಲ್ಲದೆ ಬರೋಬ್ಬರಿ ಮೂರು ತಿಂಗಳು ಕಳೆಯಲಿದೆ ಎಂದು ಬುಧವಾರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು.

ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌, ಕಳೆದ ಎರಡು ತಿಂಗಳಿಂದ ಸಿಬ್ಬಂದಿಗೆ ವೇತನ ಪಾವತಿ ಆಗದಿರುವುದು ನಿಜ. ಇದರಿಂದ ಎಲ್ಲಾ ಎನ್‌ಎಚ್‌ಎಂ ನೌಕರರಿಗೂ ಸಮಸ್ಯೆಯಾಗಿದೆ. ಕೇಂದ್ರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಈ ವರ್ಷ ಈ ರೀತಿ ಸಮಸ್ಯೆಯಾಗಿದೆ. ನಮ್ಮ ಅಧಿಕಾರಿಗಳು ಕೇಂದ್ರದೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಹೀಗಾಗಿ 2-3 ದಿನಗಳಲ್ಲಿ ವೇತನ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

ಪ್ರತಿ ಬಾರಿ ವರ್ಷವೂ ಈ ಸಮಸ್ಯೆ ಇರುತ್ತದೆ. ಆದರೆ ನಮ್ಮ ಖಜಾನೆಯಲ್ಲೇ ಹಣ ಇರುತ್ತಿದ್ದ ಕಾರಣ ನಾವು ವೇತನ ಪಾವತಿಸಿ ಕೇಂದ್ರದಿಂದ ಹಣ ಬಂದ ಬಳಿಕ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ಬಾರಿ ನಮ್ಮ ಖಜಾನೆಯಲ್ಲೇ ಓಪನಿಂಗ್‌ ಬ್ಯಾಲೆನ್ಸ್‌ (ಪ್ರಾರಂಭಿಕ ಶಿಲ್ಕು) ಇರಲಿಲ್ಲ. ಹೀಗಾಗಿ ವೇತನ ಪಾವತಿ ವಿಳಂಬವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಸುಧಾರಣಾ ಕ್ರಮ:

ಈ ಬಾರಿ ಎನ್‌ಎಚ್‌ಎಂನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಪ್ರತಿ ವರ್ಷ ನವೀಕರಿಸುತ್ತಿದ್ದ ಎನ್‌ಎಚ್‌ಎಂ ಗುತ್ತಿಗೆ ನೌಕರರ ಗುತ್ತಿಗೆಯನ್ನು ನವೀಕರಣ ಮಾಡಿರಲಿಲ್ಲ. ಬದಲಿಗೆ ಮೂರು ತಿಂಗಳ ಅವಧಿಗೆ ಮಾತ್ರ ಅಂದರೆ ಜೂ.30ರವರೆಗೆ ಮಾತ್ರ ವಿಸ್ತರಣೆ ಮಾಡಲಾಗಿತ್ತು.

ಇನ್ನು ಕೇಂದ್ರ ಸರ್ಕಾರವು ಆರ್ಥಿಕ ವರ್ಷದ ಮೊದಲ ತಿಂಗಳೇ ವೇತನ ಬಿಡುಗಡೆ ಮಾಡುವುದಿಲ್ಲ. ಪ್ರತಿವರ್ಷವೂ ಸ್ವಲ್ಪ ವಿಳಂಬವಾಗಿಯೇ ಪಾವತಿ ಮಾಡುತ್ತಿತ್ತು. ಆದರೆ ನಮ್ಮ ಬಳಿ ಹಣ ಇರುತ್ತಿದ್ದ ಕಾರಣ ಪಾವತಿ ಮಾಡುತ್ತಿದ್ದೆವು. 2023-24ನೇ ಸಾಲಿನಲ್ಲಿ ನಮ್ಮ ಬಳಿ 500 ಕೋಟಿ ರು. ಹಣ ಇತ್ತು. 2024-25ನೇ ಸಾಲಿನಲ್ಲಿ 90 ಕೋಟಿ ರು. ಇತ್ತು. ಹೀಗಾಗಿ ನಾವೇ ವೇತನ ಪಾವತಿ ಮಾಡಿದ್ದೆವು. ಆದರೆ ಈ ವರ್ಷ ನಮ್ಮ ಬಳಿ 9-10 ಕೋಟಿ ರು. ಮಾತ್ರ ಇದೆ.

ಕಳೆದ ಸಾಲಿನಲ್ಲಿ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿದ್ದರಿಂದ ಓಪನಿಂಗ್‌ ಬ್ಯಾಲೆನ್ಸ್‌ ಇಲ್ಲದಂತಾಗಿದೆ. ಹೀಗಾಗಿ ನಮ್ಮ ಖಾತೆಯಿಂದ ವೇತನ ಪಾವತಿ ಮಾಡಲು ಆಗಲಿಲ್ಲ. ಸದ್ಯದಲ್ಲೇ ಕೇಂದ್ರದಿಂದ ಹಣ ಬರಲಿದೆ. ಬಳಿಕ ಶೀಘ್ರ ವೇತನ ಪಾವತಿ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್‌ ತಿಳಿಸಿದರು.

ಕೇಂದ್ರದಿಂದ ವಿಳಂಬ, ನಮ್ಮ ನಿರ್ಲಕ್ಷ್ಯವಿಲ್ಲ:

ಕೇಂದ್ರವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆ ಮಾಡಲು ಈ ಹಿಂದೆ ಇದ್ದ ಎಸ್‌ಎನ್‌ಎ (ಸಿಂಗಲ್‌ ನೋಡಲ್‌ ಅಕೌಂಟ್) ಬದಲಿಗೆ ಸುಧಾರಿತ ಎಸ್‌ಎನ್‌ಎ-ಸ್ಪರ್ಶ್‌ ವ್ಯವಸ್ಥೆ ಜಾರಿ ಮಾಡುತ್ತಿದೆ. ಈ ಬದಲಾವಣೆ ಹಾಗೂ ತಾಂತ್ರಿಕ ಕಾರಣಗಳಿಂದ ರಾಜ್ಯ ಸೇರಿ ಬೇರೆ ರಾಜ್ಯಗಳಿಗೂ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ವೇತನ ಬಿಡುಗಡೆಗೆ ನಮ್ಮ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವರದಿ ಪರಿಣಾಮ

30,000 ಎನ್‌ಎಚ್‌ಎಂ ಸಿಬ್ಬಂದಿಗೆ 2.5 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ಬುಧವಾರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು.