ಮುಂಡಗೋಡ: ಮೇದಾರ ಸಮುದಾಯ ತಲೆ ತಲಾಂತರದಿಂದ ಮುನ್ನಡೆಸಿಕೊಂಡು ಬಂದ ‘ಕೈಕೆಲಸ’ದ ಮಹತ್ವವನ್ನು ಕೇಂದ್ರ ಸರ್ಕಾರದ ಜವಳಿ ಇಲಾಖೆ(ಹ್ಯಾಂಡಿಕ್ರಾಪ್ಟ್) ಪೆಹಚಾನ್ ಕಾರ್ಡ್ ಮೂಲಕ ಗುರುತಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಚಿತ್ರದುರ್ಗ ಕೇತೆಶ್ವರ ಮಹಾಮಠದ ರಾಜ್ಯಾಧ್ಯಕ್ಷ ಸಿ.ಪಿ. ಪಾಟೀಲ ತಿಳಿಸಿದರು.
ಇಲಾಖೆಯ ನೆರವಿನ ಮೂಲಕ ನಡೆಯುವ ಕರಕುಶಲ ವಸ್ತು ಪ್ರದರ್ಶನ, ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಶಲಕರ್ಮಿ ಪ್ರಶಸ್ತಿ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಲು ಯುವ ಮೇದಾರರಿಗೆ ತಿಳಿಸಿದರು.
ಮಂಗಳೂರು ಹ್ಯಾಂಡಿಕ್ರಾಪ್ಟ್ ಸೇವಾ ಕೇಂದ್ರದ ಸಹಾಯಕ ನಿರ್ದೇಶಕರಾದ ವೀಣಾ ಎಸ್. ಮಾತನಾಡಿ, ಪೆಹಚಾನ್ ಕಾರ್ಡ್‌ನಿಂದ ಮುದ್ರಾ ಯೋಜನೆ ಅಡಿ ಸಾಲ, ಮಾರುಕಟ್ಟೆ, ಉತ್ಪನ್ನಗಳ ಮೌಲ್ಯವರ್ಧನೆ, ಸಬ್ಸಿಡಿ, ಪೆನ್ಷನ್ ಇತ್ಯಾದಿ ಸೌಲಭ್ಯ ಪಡೆಯಲು ಸೂಚಿಸಿದರು.ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಳಗಿ ಶಾಖೆಯ ವ್ಯವಸ್ಥಾಪಕ ವೆಂಕಟೇಶ ಮಾತನಾಡಿ, ಪೆಹಚಾನ್ ಕಾರ್ಡದಾರರಿಗೆ ಬ್ಯಾಂಕ್ ನಿಯಮಾವಳಿ ಅಡಿ ಅರ್ಹತೆ ಮೇರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.
ಮಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ಪ್ರಕಾಶ ತಳವಾರ ಅಧ್ಯಕ್ಷತೆ ವಹಿಸಿದ್ದರು. ಪರಮೇಶ್ವರ ಇಡಗೋಡ, ಮರಿಯಪ್ಪ ಮೇದಾರ, ರಾಘವೇಂದ್ರ ಟಿ. ಪಾಟೀಲ್, ಮಂಜಪ್ಪ ಇಡಗೋಡ, ಸುರೇಶ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು. ಮಲ್ಲಮ್ಮ ನೀರಲಗಿ ಸ್ವಾಗತಿಸಿದರು. ದೀಪಾ ಹುನಗುಂದ, ಸಂವಿಧಾನದ ಪ್ರಸ್ತಾವನೆ ವಾಚಿಸಿದರು. ನಾಗರಾಜ ಕಟ್ಟಿಮನಿ ನಿರೂಪಿಸಿ, ವಂದಿಸಿದರು.