ಆರ್‌ಎಸ್ಎಸ್‌ನಿಂದ ರಾಷ್ಟ್ರ ಇನ್ನಷ್ಟು ಬೆಳಗಲಿ : ಪುತ್ತಿಗೆ ಶ್ರೀ

KannadaprabhaNewsNetwork |  
Published : Oct 16, 2025, 02:01 AM IST
15ಹೊಸಬಾಳೆಆರ್‌ಎಸ್‌ಎಸ್‌ನ ಪ್ರ.ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಕೃಷ್ಣಮಠಕ್ಕೆ ಭೇಟಿ ನೀಡಿದರು | Kannada Prabha

ಸಾರಾಂಶ

ಉಡುಪಿ ಶ್ರಿ ಕೃಷ್ಣಮಠಕ್ಕೆ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಭೇಟಿ ನೀಡಿದರು. ಅವರಿಗೆ ಶ್ರೀಗಳು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

 ಉಡುಪಿ :  ಸಾಧನೆಯ ಮಾರ್ಗದಲ್ಲಿ ಸಾಗುತ್ತಿರುವಾಗ ಟೀಕೆ-ಟಿಪ್ಪಣಿಗಳು ಎದುರಾಗುವುದು ಸಹಜ. ಆ ಕುರಿತಾಗಿ ತಲೆಕೆಡಿಸಿಕೊಳ್ಳಬಾರದು. ಆರ್‌ಎಸ್‌ಎಸ್‌ನ ಧ್ಯೇಯೋದ್ದೇಶ ಎಂದಿಗೂ ಸಕಾರಾತ್ಮಕವಾಗಿಯೇ ಇದೆ. ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಯಾವುದೇ ಪ್ರಚಾರ ಬಯಸದೆ, ಫಲಾಪೇಕ್ಷೆ ಇಲ್ಲದೆ ನೊಂದವರ ಸೇವೆ ಮಾಡುವುದನ್ನು ಕಂಡಿದ್ದೇವೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು. 

ಬುಧವಾರ ಶ್ರಿ ಕೃಷ್ಣಮಠಕ್ಕೆ ಭೇಟಿ ನೀಡಿದ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರಿಗೆ ಶ್ರೀಗಳು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪ್ರಸಾದವನ್ನು ನೀಡಿ ಗೌರವಿಸಿ ಆಶೀವರ್ಚನ ನೀಡಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶಸೇವೆಯ ಕಾರ್ಯದಲ್ಲಿ ಶತಮಾನ ಕಂಡಿರುವುದು ಸಂತರಾದ ನಮಗೂ ಸಂತಸ ತಂದಿದೆ. ಹಿಂದುತ್ವದ ರಕ್ಷಣೆಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಆರ್‌ಎಸ್‌ಎಸ್‌ನ ನಿಸ್ವಾರ್ಥ ಸೇವೆಯಿಂದ ಭಾರತ ವಿಶ್ವ ಮಟ್ಟದಲ್ಲಿ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.

ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ಸಂಘ ಇನ್ನಷ್ಟು ಪ್ರಬಲವಾಗಿ ಬೆಳೆಯಲಿ, ಬೆಳಗಲಿ. ಆ ನಿಟ್ಟಿನಲ್ಲಿ ಸಂಘಟನೆಗೆ ಉಡುಪಿ ಶ್ರೀ ಕೃಷ್ಣನು ಇನ್ನಷ್ಟು ಶಕ್ತಿ ಕರುಣಿಸಲಿ. ಆರ್‌ಎಸ್‌ಎಸ್‌ ಮೂಲಕ ಎಲ್ಲ ಕುಟುಂಬಗಳಲ್ಲೂ ಸಂಸ್ಕಾರ ವೃದ್ಧಿಸಲಿ. ತನ್ಮೂಲಕ ರಾಷ್ಟ್ರೀಯ ಹಿತಾಸಕ್ತಿ ಜಾಗೃತವಾಗಲಿ. ಶತಮಾನೋತ್ಸವದ ಸಂಭ್ರಮದಲ್ಲಿರುವ ಸಂಘಕ್ಕೆ ಶುಭವಾಗಲಿ ಎಂದರು.

ಈ ಸಂದರ್ಭ ಮಾತನಾಡಿದ ಹೊಸಬಾಳೆ, ಹಿಂದುಗಳಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಸಂದರ್ಭ ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಪುತ್ತಿಗೆ ಶ್ರೀಗಳು ಜನರಲ್ಲಿ ಧಾರ್ಮಿಕ ಹಾಗೂ ದೇವರ ಭಾವವನ್ನು ಜಾಗೃತಗೊಳಿಸುತ್ತಿದ್ದಾರೆ. ಸಮಸ್ತ ಹಿಂದು ಸಮಾಜಕ್ಕೆ ಎಲ್ಲಾ ಮಠಾಧೀಶರ ಆಶೀರ್ವಾದ, ಮಾರ್ಗದರ್ಶನ ಯಾವತ್ತೂ ಇರಬೇಕು ಎಂದು ಹೇಳಿದರು.

ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಹೊಸಬಾಳೆ ಅವರಿಗೆ ಅನುಗ್ರಹಿಸಿದರು. ಹೊಸಬಾಳೆ ಅವರು ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಸ್ವೀಕರಿಸಿದರು. ಉಡುಪಿ ಜಿಲ್ಲಾ ಆರ್.ಎಸ್.ಎಸ್.ನ ಪ್ರಮುಖ ಮಟ್ಟು ಲಕ್ಷ್ಮೀನಾರಾಯಣ ಆಚಾರ್ಯ ಉಪಸ್ಥಿತರಿದ್ದರು.ಇದಕ್ಕೂ ಮೊದಲು ದತ್ತಾತ್ರೇಯ ಹೊಸಬಾಳೆ ಅವರನ್ನು ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಗೌರವಾದರಗಳಿಂದ ಭವ್ಯವಾಗಿ ಸ್ವಾಗತಿಸಲಾಯಿತು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇತರರಿದ್ದರು.

PREV
Read more Articles on

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ