ಜಗತ್ತಿನಲ್ಲಿ ಸೇವೆ ಮಾಡುವವರ ಸಂಖ್ಯೆ ಹೆಚ್ಚಾಗಲಿ: ನಿರ್ಮಲಾನಂದನಾಥ ಶ್ರೀ

KannadaprabhaNewsNetwork | Published : May 20, 2025 11:58 PM
ಸರ್ವರ ಅಭಿವೃದ್ಧಿಯಲ್ಲಿ ನಮ್ಮ ಬದುಕಿನ ಹಿತವೂ ಅಡಗಿರಬೇಕು. ಸೇವೆ ಮಾಡುವವರ ಮನಸ್ಸು, ಮಾನಸಿಕ ಆರೋಗ್ಯ, ದೈಹಿಕ ಸದಾ ಚೆನ್ನಾಗಿರುತ್ತದೆ. ಸೇವಾ ಮನೋಭಾವನೆಯ ವ್ಯಕ್ತಿಗಳು ಸಮಾಜಕ್ಕೆ ಮುಕುಟಪ್ರಾಯರಾಗಿರುತ್ತಾರೆ. ಈ ಹಾದಿಯಲ್ಲಿ ಮಲ್ಲಿಕಾರ್ಜುನ್ ನಡೆಯುತ್ತಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜಗತ್ತಿನಲ್ಲಿ ಸೇವೆ ಮಾಡುವವರ ಸಂಖ್ಯೆ ಹೆಚ್ಚಬೇಕು. ಸಮಾಜ ಸೇವೆ ಮೂಲಕ ಬಡಜನರ ಕಣ್ಣೀರು ಒರೆಸಿದವರು ಅಳಿದ ನಂತರವೂ ಜನ ಮಾನಸದಲ್ಲಿ ಉಳಿಯುತ್ತಾರೆ ಎಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀರಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಜಯನಗರ ಬಡಾವಣೆಯಲ್ಲಿ ಆರ್‌ಟಿಒ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್‌ನಿಂದ ಮಲ್ಲಿಕಾರ್ಜುನ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಬೃಹತ್ ಆರೋಗ್ಯ ಮೇಳ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸರ್ವರ ಅಭಿವೃದ್ಧಿಯಲ್ಲಿ ನಮ್ಮ ಬದುಕಿನ ಹಿತವೂ ಅಡಗಿರಬೇಕು. ಸೇವೆ ಮಾಡುವವರ ಮನಸ್ಸು, ಮಾನಸಿಕ ಆರೋಗ್ಯ, ದೈಹಿಕ ಸದಾ ಚೆನ್ನಾಗಿರುತ್ತದೆ. ಸೇವಾ ಮನೋಭಾವನೆಯ ವ್ಯಕ್ತಿಗಳು ಸಮಾಜಕ್ಕೆ ಮುಕುಟಪ್ರಾಯರಾಗಿರುತ್ತಾರೆ. ಈ ಹಾದಿಯಲ್ಲಿ ಮಲ್ಲಿಕಾರ್ಜುನ್ ನಡೆಯುತ್ತಿದ್ದಾರೆ ಎಂದರು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೀಗಳು ಅಭಿನಂದಿಸಿ, ಕಲಿಕೆಯಲ್ಲಿ ನಿಷ್ಠೆ, ಗುರು ಹಿರಿಯರು ಮತ್ತು ತಂದೆ ತಾಯಿಗಳ ಮೇಲೆ ಶ್ರದ್ಧೆ ಗೌರವ ಇರಬೇಕು. ಕಲಿಕಾ ಮಕ್ಕಳ ವಿಷಯದ ಮೇಲೆ ಪೋಷಕರು ಒತ್ತಡ ಹಾಕಬಾರದು. ಮಕ್ಕಳು ತಮ್ಮ ಕಲಿಕಾ ಅಭಿರುಚಿಗೆ ತಕ್ಕ ಐಚ್ಛಿಕ ವಿಷಯವನ್ನು ಆಯ್ಕೆಮಾಡಿಕೊಂಡು ಯಶಸ್ಸಿನ ಗುರಿ ಮುಟ್ಟುವಂತೆ ಕಿವಿಮಾತು ಹೇಳಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಶ್ರೀಗಳು ಮಾತನಾಡಿ, ಬಡತನದ ಬದುಕಿನ ಅರಿವಿದ್ದವರು ಸಮಾಜದಲ್ಲಿ ಸಾಧಕರಾಗಿದ್ದಾರೆ. ಶಿಕ್ಷಿತರು ಅಹಂಕಾರ ಮತ್ತು ನಿರ್ಧಯಿಗಳಾಗಬಾರದು. ಅಹಂಕಾರ ತ್ಯಜಿಸಿ ದೀನ ದಲಿತರ ಪರ ಕಾಳಜಿ ವಹಿಸಬೇಕು. ನಮ್ಮ ವ್ಯಕ್ತಿತ್ವಕ್ಕೆ ಶ್ರೇಷ್ಠತೆ ಬದುವುದು ನಾವು ಮಾಡುವ ದಾನ ಧರ್ಮಗಳಿಂದ ಮಾತ್ರ ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ 350 ವಿದ್ಯಾರ್ಥಿಗಳನ್ನು ಅವರ ಪೋಷಕರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರ ಪಿಂಡ, ಮಧುಮೇಹ, ಪಿತ್ತ ಜನಕಾಂಗ, ಕ್ಯಾನ್ಸರ್, ಗರ್ಭಿಣಿ ಮತ್ತು ಸ್ತ್ರೀರೋಗ, ಕೀಲು ಮೂಳೆ, ದಂತ ವೈದ್ಯ, ಕಿವಿ, ಮೂಗು, ಚರ್ಮರೋಗ ರೋಗ ಸೇರಿದಂತೆ ವಿವಿಧ ರೋಗಘಲ ತಜ್ಞ ವೈದ್ಯರು ನೂರಾರು ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಸಲಹೆ ನೀಡಿದರು.

ಸಮಾರಂಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಕೆ.ಆರ್.ನಗರ ಶಾಖಾ ಮಠದ ಡಾ.ಶಿವಾನಂದಪುರಿ ಸ್ವಾಮೀಜಿ, ತೆಂಡೇಕೆ ಬಾಳೆಹೊನ್ನೂರು ಸಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕಾಪನಹಳ್ಳಿ ಗವೀಮಠದ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್.ನಟರಾಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಜಿಪಂ ಮಾಜಿ ಸದಸ್ಯ ಶೀಳನೆರೆ ಅಂಬರೀಶ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಗಾಯಿತ್ರಿ ಮಲ್ಲಿಕಾರ್ಜುನ, ಗೌರವಾಧ್ಯಕ್ಷ ಜಯರಾಂ ನೆಲ್ಲಿತ್ತಾಯ, ಟ್ರಸ್ಟಿಗಳಾದ ರಾಕೇಶ್ ಶೆಟ್ಟಿ, ರಾಘವೇಂದ್ರ ಪ್ರಸಾದ್, ಎ.ರಮೇಶ್, ಜಿ.ಕೆ.ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.