ಪರಿಶಿಷ್ಟ ಜಾತಿ ಒಳಮೀಸಲು ಸಮೀಕ್ಷೆಯಲ್ಲಿ ಬೇಡ ಜಂಗಮ ಸೇರ್ಪಡೆ ಸಲ್ಲದು: ಖರ್ಗೆ

KannadaprabhaNewsNetwork | Published : May 20, 2025 11:58 PM
No movable property should be included in the Scheduled Caste Internal Reservation Survey
Follow Us

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪರಿಶಿಷ್ಟ ಜಾತಿ ಒಳ ಮೀಸಲು ಸಮೀಕ್ಷೆಯಲ್ಲಿ ಬೇಡ ಜಂಗಮ ಸಮುದಾಯ ಸೇರ್ಪಡೆಯಲ್ಲಿ ಎಚ್ಚರವಿರಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸೂಚಿಸಿದರು.

ಸಂಕಲ್ಪ ಸಮರ್ಪಣ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ಬರೀ 500 ಕುಟುಂಬಗಳಿದ್ದ ಅಲೆಮಾರಿ ಬೇಡ ಜಂಗಮರು ಈಗ 4.5 ಲಕ್ಷ ಜನಸಂಖ್ಯೆ ಹೇಗಾಗಿದೆ? ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಬುಡ್ಗ ಜಂಗಮ, ಬೇಡ ಜಂಗಮರು ಸಿಗುತ್ತಾರೆ. ಈ ಬಗ್ಗೆ ವಿಶೇಷ ಗಮನ ಹರಿಸಿ ಎಂದರು.

ಬಡ ವೀರಶೈವ ಜಂಗಮರಿಗೆ ಸಾಧ್ಯವಾದ ಎಲ್ಲ ಸಹಾಯವನ್ನೂ ಮಾಡಿ. ಆದರೆ, ಪರಿಶಿಷ್ಟರ ಅನ್ನ ಕಸಿಯಲು ಅವಕಾಶ ಮಾಡಿಕೊಡಬೇಡಿ. ಅಕ್ರಮವಾಗಿ ಸೇರ್ಪಡೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಿ ಎಂದು ಸಲಹೆ ನೀಡಿದರು.

ತಾವು ಈ ಗಂಭೀರ ವಿಷಯ ಪ್ರಸ್ತಾಪಿಸುವಾಗ ಅತ್ತ ವೇದಿಕೆಯಲ್ಲಿ ರಾಹುಲ್‌ ಗಾಂಧಿ ಅವರ ಜತೆಗೆ ಚರ್ಚಿಸುತ್ತಿದ್ದ ಡಿ.ಕೆ. ಶಿವಕುಮಾರ ಮೇಲೆ ಗರಂ ಆದ ಖರ್ಗೆ, ನಾನು ಖಂಡಿತ, ನಿಮಗೆ ರಾಹುಲ್‌ ಗಾಂಧಿ ಅವರ ಅಪಾಯಿಂಟ್‌ಮೆಂಟ್‌ ಕೊಡಿಸುವೆ. ನೀವು ಅಲ್ಲಿಗೆ ಹೋಗಿ ಚರ್ಚಿಸುವಿರಂತೆ, ಈಗ ಸುಮ್ಮನಿರಿ ಎಂದು ಗದರಿಸಿದರು.ಅಜ್ಜಿ ಇಂದಿರಾ ಪುತ್ಥಳಿ ಅನಾವರಣಗೊಳಿಸಿದ ರಾಹುಲ್:

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಮಾವೇಶ ಉದ್ಘಾಟಿಸಿ, ಇದೇ ವೇಳೆ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಪುತ್ಥಳಿ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ನಾವು ಚುನಾವಣೆ ಸಂದರ್ಭ ಕರ್ನಾಟಕ ಜನತೆಗೆ ನೀಡಿದ್ದ ಎಲ್ಲ ಪಂಚ ಗ್ಯಾರಂಟಿ ಯೋಜನೆಯ ಭರವಸೆಗಳನ್ನು ಈಡೇರಿಸಿದ್ದೇವೆ. ಪಂಚ ಗ್ಯಾರಂಟಿ ಯೋಜನೆಯಡಿ ನಾವು ನೀಡುತ್ತಿರುವ ಹಣ ಜನರ ಶಿಕ್ಷಣ, ಆರೋಗ್ಯ ಮುಂತಾದವುಗಳಿಗೆ ಸದ್ಬಳಕೆಯಾಗುತ್ತಿದೆ. ಬಡವರು, ಹಿಂದುಳಿದವರು, ಬುಡಕಟ್ಟು ಸಮುದಾಯದವರಿಗೆ ನೀಡುತ್ತಿರುವ ನಮ್ಮ ಸರ್ಕಾರದ ಹಣ ನೇರ ಖಾತೆ ಸೇರುತ್ತದೆ. ಅದೇ ಹಣ ಮಾರುಕಟ್ಟೆಯಲ್ಲಿ ಉತ್ಪಾದನೆ ಹೆಚ್ಚಿಸುತ್ತದೆ. ಸಾಮಾನ್ಯ ಜನರಿಗೆ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿದೆ. ಇದರಿಂದ ಪ್ರತಿ ಗ್ರಾಮದಲ್ಲೂ ಹಣದ ವಹಿವಾಟು ಹೆಚ್ಚಳವಾಗುತ್ತಿದ್ದು, ಸರ್ಕಾರದ ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತಿದೆ ಎಂದರು.ವಿಧಾನಸಭೆ ಚುನಾವಣೆ ವೇಳೆಯಲ್ಲಿ ನಾನು ರಾಜ್ಯಕ್ಕೆ ಬಂದಂತಹ ಸಂದರ್ಭದಲ್ಲಿ ಇಲ್ಲಿನ ಹಟ್ಟಿ, ತಾಂಡಾ ಮುಂತಾದ ಜನವಸತಿ ಪ್ರದೇಶಗಳಲ್ಲಿನ ಲಕ್ಷಾಂತರ ಕುಟುಂಬಗಳು ಯಾವುದೇ ದಾಖಲೆಗಳಿಲ್ಲದೆ, ಭದ್ರತೆ ಇಲ್ಲದೆ ಬದುಕುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದೆ. ಆಗಲೇ ನಾವು ಚರ್ಚಿಸಿ, ಅಂತಹ ಬಡ ಕುಟುಂಬಗಳು ವಾಸಿಸುವ ಮನೆಗಳಿಗೆ ಹಕ್ಕುಪತ್ರ ನೀಡಿ, ಅವರಿಗೆ ನೆಮ್ಮದಿ ಕಲ್ಪಿಸಲು ನಿರ್ಧರಿಸಿದ್ದೆವು. ಅದರಂತೆ ಈಗ ನಾವು 6ನೇ ಗ್ಯಾರಂಟಿಯಾಗಿ ಕಂದಾಯ ಗ್ರಾಮಗಳನ್ನು ರಚಿಸಿ, ರಾಜ್ಯದ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಿ, ಬದುಕಿಗೆ ಭದ್ರತೆ ನೀಡಿದ್ದೇವೆ. ರಾಜ್ಯದ ಜನವಸತಿ ಪ್ರದೇಶಗಳಲ್ಲಿ ದಾಖಲೆಗಳಿಲ್ಲದೇ ವಾಸಿಸುತ್ತಿರುವ ಆಸ್ತಿಯ ಹಕ್ಕುಪತ್ರ ಕೊಟ್ಟು, ಅವರು ನೆಮ್ಮದಿಯಿಂದ ಬದುಕು ನಡೆಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.