ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಣೆ ಮಾಡುವ ಬಿತ್ತನೆ ಬೀಜ ವಿತರಣೆಗೆ ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ನಗರದ ಪ್ರವಾಸಿ ಮಂದಿರದಲ್ಲಿ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ವಿತರಿಸಲಾಗುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರು ಪಡೆದು ಬಿತ್ತನೆ ಮಾಡಬೇಕು. ಅಧಿಕಾರಿಗಳು ಬಿತ್ತನೆಗೆ ಕೊರತೆಯಾಗದಂತೆ ಬೇಡಿಕೆಗೆ ಅನುಗುಣವಾಗಿ ಬೀಜ ಮತ್ತು ಗೊಬ್ಬರವನ್ನು ಪೂರೈಸಬೇಕೆಂದು ಸಲಹೆ ನೀಡಿದರು.ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ವೀರಭದ್ರಪ್ಪ ಮಾತನಾಡಿ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ತಾಲೂಕಿನಲ್ಲಿ 5 ಕೇಂದ್ರಗಳನ್ನು ತೆರೆಯಲಾಗಿದೆ. ಹಾವೇರಿ, ಕರ್ಜಗಿ, ಗುತ್ತಲ ರೈತ ಸಂಪರ್ಕ ಕೇಂದ್ರಗಳು, ನೆಗಳೂರ ಮತ್ತು ಹೊಸರಿತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಿತರಣೆ ಮಾಡಲಾಗುತ್ತದೆ. ಗೋವಿನಜೋಳ 450 ಕ್ವಿಂಟಲ್, ಭತ್ತ 25 ಕ್ವಿಂ., ತೊಗರಿ 100 ಕ್ವಿಂ., ಹೆಸರು 50 ಕ್ವಿಂ., ಸೋಯಾಅವರೆ 1000 ಕ್ವಿಂ. ಹಾಗೂ ಶೇಂಗಾ 150 ಕ್ವಿಂಟಲ್ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಅದೇ ರೀತಿ ಯುರಿಯಾ, ಡಿಎಪಿ, ಕಾಂಪ್ಲೆಕ್ಸ್ ಸೇರಿದಂತೆ ಒಟ್ಟು 5,643 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ತಾಲೂಕಿನ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ರೈತ ಮುಖಂಡ ರಾಜು ತರ್ಲಘಟ್ಟ, ಸಿದ್ದಪ್ಪ ಕ್ಯಾಲಕೊಂಡ ಇತರರು ಉಪಸ್ಥಿತರಿದ್ದರು.ರೈತ ಮುತ್ತಣ್ಣ ಪೂಜಾರಗೆ ಗೌರವ ಡಾಕ್ಟರೇಟ್
ಹಾನಗಲ್ಲ: ತಾಲೂಕಿನ ಕಾಮನಹಳ್ಳಿ ಗ್ರಾಮದ ಪ್ರಗತಿಪರ ರೈತ ಮುತ್ತಣ್ಣ ಬೀರಪ್ಪ ಪೂಜಾರ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.ಮೇ 14ರಂದು ನಡೆದ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್‌ನ್ನು ಪ್ರದಾನ ಮಾಡಿದರು.ಕೃಷಿಯಲ್ಲಿನ ಸಾಧನೆಗೆ ಮುತ್ತಣ್ಣ ಪೂಜಾರ ಅವರಿಗೆ ಈ ಹಿಂದೆ ಅನೇಕ ಪ್ರಶಸ್ತಿಗಳು ಒಲಿದು ಬಂದಿದ್ದು, 2015ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅದೇ ವರ್ಷ ರಾಜ್ಯ ಸರ್ಕಾರದಿಂದ ಕೃಷಿ ಪಂಡಿತ ಪ್ರಶಸ್ತಿ, 2013ರಲ್ಲಿ ಗುಜರಾತ ರಾಜ್ಯ ಸರ್ಕಾರದಿಂದ ಉತ್ತಮ ಕೃಷಿಕ ಪ್ರಶಸ್ತಿ, ಸಿ. ಬೈರೇಗೌಡ ಸ್ಮಾರಕ ರಾಜ್ಯಮಟ್ಟದ ಪ್ರಶಸ್ತಿಯು ಬೆಂಗಳೂರ ಕೃಷಿ ವಿವಿ ವತಿಯಿಂದ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ಮುತ್ತಣ್ಣ ಪೂಜಾರ ಅವರ ಮುಡಿಗೇರಿದ ಮಹತ್ವದ ಪ್ರಶಸ್ತಿಗಳಾಗಿವೆ.