ಕ್ಷುದ್ರ ಶಕ್ತಿಗಳು ಎದುರಿಸುವ ಶಕ್ತಿ ಹೆಣ್ಣಿಗೆ ಬರಲಿ

KannadaprabhaNewsNetwork |  
Published : Dec 04, 2024, 12:34 AM IST
೦೧ಬಿಹೆಚ್‌ಆರ್ ೧: ಬಾಳೆಹೊನ್ನೂರಿನಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲೆ 318ರ ವತಿಯಿಂದ ಆಯೋಜಿಸಿದ್ದ ಇನ್ನರ್‌ವ್ಹೀಲ್ ಜಿಲ್ಲಾ ಸಮ್ಮೇಳನ ಹೃದಯ ವೈಶಾಲ್ಯ ಕಾರ್ಯಕ್ರಮವನ್ನು ಜಿಲ್ಲಾ ಛೇರ್ಮನ್ ವೈಶಾಲಿ ವಿ.ಕುಡ್ವ ಉದ್ಘಾಟಿಸಿದರು. ಡಾ. ಟಿ.ಸಿ.ಪೂರ್ಣಿಮಾ, ಸುಮಾ, ಶಬರಿ ಕಡಿದಾಳ್, ಜಾಹ್ನವಿ, ವಿದ್ಯಾ ಎ.ಶೆಟ್ಟಿ ಇದ್ದರು. | Kannada Prabha

ಸಾರಾಂಶ

ಹೆಣ್ಣು ಮಕ್ಕಳ ಮೇಲೆ ಇಂದು ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಲವು ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ಸಮಾಜದ ಕ್ಷುದ್ರ ಶಕ್ತಿಗಳನ್ನು ಎದುರಿಸುವ ಶಕ್ತಿ ಹೆಣ್ಣಿಗೆ ಬರಬೇಕು ಎಂದು ಭಾರತೀಯ ಸಮಾಚಾರ ಸೇವೆಯ ಹಿರಿಯ ಅಧಿಕಾರಿ ಡಾ. ಟಿ.ಸಿ. ಪೂರ್ಣಿಮಾ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಹೆಣ್ಣು ಮಕ್ಕಳ ಮೇಲೆ ಇಂದು ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಲವು ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ಸಮಾಜದ ಕ್ಷುದ್ರ ಶಕ್ತಿಗಳನ್ನು ಎದುರಿಸುವ ಶಕ್ತಿ ಹೆಣ್ಣಿಗೆ ಬರಬೇಕು ಎಂದು ಭಾರತೀಯ ಸಮಾಚಾರ ಸೇವೆಯ ಹಿರಿಯ ಅಧಿಕಾರಿ ಡಾ. ಟಿ.ಸಿ. ಪೂರ್ಣಿಮಾ ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲೆ 318ರ ವತಿಯಿಂದ ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಆಯೋಜಿಸಿದ್ದ 55ನೇ ಜಿಲ್ಲಾ ಸಮ್ಮೇಳನ ಹೃದಯ ವೈಶಾಲ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಾವು ಇಂದು ಮಾಧ್ಯಮಗಳ ಮೂಲಕ ಕಾಣಬಹುದಾಗಿದ್ದು, ದೌರ್ಜನ್ಯಗಳು ನಡೆದಿರುವ ಬಗ್ಗೆ ಹಲವು ಜ್ವಲಂತ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇವುಗಳನ್ನು ನಿಯಂತ್ರಿಸಲು ಪ್ರಬಲವಾಗಿ ಹೆಣ್ಣಿಗೆ ಕಾನೂನಿನ ಅಸ್ತ್ರ ಬೇಕಿದೆ. ಕ್ರೀಡೆ, ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ ಎಂದು ತಿಳಿಸಿದರು.

ಮಹಿಳೆಯರು ಸಮಾನತೆಯ ಬಗ್ಗೆ ಹೆಚ್ಚು ಗಮನಹರಿಸಬೇಕಿದ್ದು, ಹೆಣ್ಣು ಒಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದರೆ ಅಲ್ಲಿ ಸರಿಯಾಗಿ ಆಕೆಗೆ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಹೀಗಾದರೆ ಸಮಾನತೆ ಎಲ್ಲಿದೆ ಎಂದು ಪ್ರಶ್ನಿಸಿದರು. ಪ್ರಪಂಚದಲ್ಲಿ ತ್ಯಾಗಮಯಿ ಆಗದ ಹೆಣ್ಣು ಯಾರೂ ಸಹ ಇಲ್ಲ. ಏಕೆಂದರೆ ಆಕೆ ಯಾವುದೇ ತ್ಯಾಗ, ಸಮರ್ಪಣಾ ಭಾವ, ರಾಜಿಗೆ ಒಳಪಡುತ್ತಾಳೆ. ಸಹನೆ, ಕ್ಷಮತೆ ಹೆಣ್ಣಿಗಲ್ಲದೆ ಪುರುಷರಿಗೆ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲಾ ಚೇರ್ಮನ್ ವೈಶಾಲಿ ವಿ. ಕುಡ್ವ ಮಾತನಾಡಿ, ಇನ್ನರ್‌ವ್ಹೀಲ್ ಜಿಲ್ಲೆ 318ರ ವತಿಯಿಂದ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಸಮ್ಮೇಳನದ ವಿಶೇಷ ಆತಿಥ್ಯದೊಂದಿಗೆ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಆಗಮಿಸಿ, ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಇನ್ನರ್‌ವ್ಹೀಲ್ ಮೂಲಕ ಮಹಿಳೆಯರು ಸಬಲೀಕರಣ ಸಾಧಿಸಲು, ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಲು ಸಾಧ್ಯ ಎಂದು ತಿಳಿಸಿದರು.

ಇನ್ನರ್‌ವ್ಹೀಲ್ ಕ್ಲಬ್‌ನ ಜಿಲ್ಲಾ ಪದಾಧಿಕಾರಿಗಳಾದ ಸುಮಾ ಕೃಷ್ಣ, ಶಬರಿ ಕಡಿದಾಳ್, ಪೂರ್ಣಿಮಾ ರವಿ, ರಜನಿ ಭಟ್, ಉಮಾ, ಚಿತ್ರಾ ರಾವ್, ದೀಪಾ ಭಂಡಾರಿ, ಅನಿತಾ, ವಿದ್ಯಾ ಎ. ಶೆಟ್ಟಿ, ಕವಿತಾ ಕೇಶವ್, ಜೊಹರಾ, ಜಾಹ್ನವಿ ಜಯರಾಮ್, ಶಾಲಿನಿ ನಾಯಕ್, ಬಿ.ಸಿ. ಗೀತಾ, ಪುಷ್ಪಾ, ಮಾಲಿನಿ ಹೆಬ್ಬಾರ್, ಮಿತ್ರಾ ಪ್ರಭು ಮತ್ತಿತರರು ಹಾಜರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ