ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ ಕಡೂರುಸ್ವಾಭಿಮಾನದ ಪ್ರತೀಕವಾದ ಕನ್ನಡದ ರಕ್ಷಣೆ ಮತ್ತು ಪೋಷಣೆಗೆ ಕನ್ನಡಿಗರು ನಿರಂತರವಾಗಿ ಕೈ ಜೋಡಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾಷಾವಾರು ಪ್ರಾಂತಗಳ ರಚನೆಗೂ ಮುನ್ನವೇ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು 1905ರಲ್ಲಿಯೇ ಏಕೀಕೃತ ಕರ್ನಾಟಕ ನಿರ್ಮಾಣವಾಗಬೇಕೆಂಬ ದನಿ ಎತ್ತಿದ್ದರು. 1956ರಲ್ಲಿ ಮೈಸೂರು ರಾಜ್ಯ ರಚನೆ ನಂತರ ಅವರ ಕನಸು 1973ರಲ್ಲಿ ದೇವರಾಜ ಅರಸರ ಮೂಲಕ ನನಸಾಗಿ ಕರ್ನಾಟಕ ಉದಯ ವಾಯಿತು. 1984ರಲ್ಲಿ ಡಾ.ರಾಜಕುಮಾರ್ ನೇತೃತ್ವದಲ್ಲಿ ಕನ್ನಡಿಗರ ಪ್ರಚಂಡ ಪ್ರವಾಹ ಗೋಕಾಕ್ ವರದಿ ಜಾರಿಗಾಗಿ ನಡೆಸಿದ ಚಳುವಳಿ ಕನ್ನಡಿಗರ ಸ್ವಾಭಿಮಾನಕ್ಕೆ ಕೈಗನ್ನಡಿಯಾಯಿತು. ಕರ್ನಾಟಕವನ್ನು ಗಡಿ ವಿಷಯದಲ್ಲಿ ಮಹಾರಾಷ್ಟ್ರ, ನದಿನೀರಿನ ವಿಷಯದಲ್ಲಿ ಆಂದ್ರ ಮತ್ತು ತಮಿಳುನಾಡುಗಳು ಕೆಣಕುತ್ತಲೇ ಇವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಸ್ವಾಭಿಮಾನ ಎತ್ತಿ ಹಿಡಿಯಲು ಕನ್ನಡಿಗರು ಮುಂದಾಗಬೇಕು. ನಾಡು-ನುಡಿ ಅಭಿವೃದ್ಧಿಗೆ ಸರ್ಕಾರಗಳು ನಿರಂತರ ಕ್ರಮ ವಹಿಸುತ್ತಿದ್ದು, ತಾಂತ್ರಿಕ ಪದವಿಗಳೂ ಕನ್ನಡದಲ್ಲಿ ಲಭಿಸು ವಂತಾಗಲು ಇಂದು ಸಾಧ್ಯವಾಗಿದೆ ಎಂದು ತಿಳಿಸಿದರು.
ನಾಡಿನ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದ್ದು ಸರಿ ಆದರೆ ಬಸವೇಶ್ವರರನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ ಎಂದು ಆಗ್ರಹಿಸಿದರು.ಧ್ವಜಾ ರೋಹಣ ನೆರವೇರಿಸಿದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಕನ್ನಡ ಭಾಷೆ ಕಂಪು ಎಲ್ಲೆಡೆ ಪಸರಿಸ ಬೇಕು. ನಾವು ಮುಂದಿನ ಪೀಳಿಗೆಗೆ ಸೊಗಡು ಹಂಚಬೇಕು. ನಮ್ಮ ಭಾಷೆ ನಮ್ಮ ಆತ್ಮ, ಅಸ್ತಿತ್ವ,ಸಾಹಿತ್ಯ, ಕಾವ್ಯ, ಸಂಸ್ಕೃತಿ ಮತ್ತು ಭಾವನೆಗಳ ಗುಚ್ಛವಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಭರವಸೆ ದೃಢ ಹೆಜ್ಜೆ ಇಟ್ಟಿರುವ ರಾಜ್ಯವು ಸಾಮಾಜಿಕ ಸೌಹಾರ್ದತೆ ಪ್ರತೀಕ ಹಾಗೂ ವಿವಿಧತೆಯಲ್ಲಿ ಏಕತೆ ಮಾದರಿಯಾಗಲಿ. ಅದಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಮ್ಮ ನಾಡಿಗೆ ಸರ್.ಎಂ.ವಿಶ್ವೇಶ್ವರಯ್ಯನವರ ಮಾದರಿ ದೂರದೃಷ್ಟಿಯ ಪ್ರತಿಭೆಗಳ ನಾಯಕತ್ವ ಬೇಕು. ಮುಚ್ಚುತ್ತಿರುವ ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರ ಮತ್ತು ಶಾಸಕರು, ಜನಪ್ರತಿನಿಧಿಗಳು ಶ್ರಮಿಸಬೇಕು. ಬೆಳಗಾವಿಯಲ್ಲಿ ಇರುವ ಮರಾಠಿ ಭಾಷಿಕರು ನಮ್ಮ ನಾಡಿನ ನೆಲ-ಜಲ ಬಳಸಿ ಪದೇ ಪದೇ ರಾಜ್ಯವಿರೋಧಿ ಕಿಡಿ ಹಚ್ಚುತ್ತಾರೆ. ನಾಡಿನ ಅಭಿವೃದ್ಧಿಗೆ ಇವರ ಕೊಡುಗೆ ಏನು? ನಮ್ಮ ನಾಡು-ನುಡಿ ರಕ್ಷಿಸಲು ನಾವೆಲ್ಲರೂ ಶ್ರಮಿಸೋಣ ಎಂದರು. ಬಿಇಒ ಎಂ.ಎಚ್.ತಿಮ್ಮಯ್ಯ ಮಾತನಾಡಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್ ತಂಡ ದವರು ಪರೇಡ್ ನಡೆಸಿ ಧ್ವಜವಂದನೆ ಸಲ್ಲಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಾಡಿನ ಕಲೆ, ಸಂಸ್ಕೃತಿಯ ಕುರಿತು ಮಾತನಾಡಿ, ಕನ್ನಡ ಗೀತೆಗಳಿಗೆ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ 8 ಜನರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪರೇಡ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಕ್ಕೆ ತಾಲೂಕು ಆಡಳಿತದಿಂದ ಪ್ರಶಸ್ತಿ ನೀಡಲಾಯಿತು. ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದ ತಂಡಗಳಿಗೆ ಶಾಸಕ ಆನಂದ್ ವೈಯಕ್ತಿಕವಾಗಿ ಪುರಸ್ಕಾರ ನೀಡಿದರು. ಪತ್ರಕರ್ತ ಎಂ.ಎನ್.ಜಗದೀಶ್ಅ ವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬೀರೂರು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ, ತಾಲೂಕು ಪಂಚಾಯಿತಿ ಇಒ ಪ್ರವೀಣ್ ಸಿ.ಆರ್, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ನಾಗರಿಕರು, ಪೋಷಕರು, ಶಿಕ್ಷಕರು ಇದ್ದರು.1ಕೆಕೆಡಿಯು1
ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ 70ನೇ ಕನ್ನಡ ರಾಜ್ಯೋತ್ಸವವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ತಹಸೀಲ್ದಾರ್ ಮತ್ತಿತರರು ಇದ್ದರು.