ಕನ್ನಡಪ್ರಭ ವಾರ್ತೆ ಮೈಸೂರು
ದೇಶ ಕಾಯುತ್ತಿರುವ ಯೋಧರಿಗೆ ಎಲ್ಲಾ ರೀತಿಯ ಶಕ್ತಿ ದೊರೆಯಲಿ ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ (ಮೆಟ್ರೋಪೋಲ್) ವೃತ್ತದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ತಿರಂಗಾ ಯಾತ್ರೆಯಲ್ಲಿ ಮಾತನಾಡಿದ ಅವರು, ವಿಶ್ವದ ಮುಂದೆ ಭಾರತವು ತನ್ನ ಶಕ್ತಿ ಪ್ರದರ್ಶನ ಮಾಡುವ ಅನಿವಾರ್ಯತೆ ಬಂದಿದ್ದು ವಿಷಾದ ಸಂಗತಿ. ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿದ್ದರು. ಹೀಗಾಗಿ, ಭಾರತವು ಅನಿವಾರ್ಯವಾಗಿ ತಮ್ಮ ಸುರಕ್ಷತೆಗಾಗಿ ಹೋರಾಟ ಮಾಡಬೇಕಾಯಿತು ಎಂದರು.
ಶಾಂತಿಯನ್ನು ಬಯಸದ ಹುಚ್ಚು ಮನಸ್ಸುಗಳು ಮಾಡುವ ಕ್ರೌರ್ಯಕ್ಕಾಗಿ ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡವಾಯಿತು. ಸಿಂದೂರವನ್ನು ಅಳಿಸಿದಕ್ಕೆ ತಕ್ಕಂತೆ ಅದೇ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಸೇನೆಯು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರಕ್ಷಣೆಗಾಗಿ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ, ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಿದೆ. ದೇಶದ ಗಡಿಯಲ್ಲಿ ಚಳಿ, ಮಳೆ, ಬಿಸಿಲು ಎನ್ನದೆ ನಾಗರಿಕರ ರಕ್ಷಣೆ ಮಾಡುವ ಸೈನಿಕರಿಗೆ ನಾವಿದ್ದೇವೆ ಎನ್ನುವ ಆತ್ಮವಿಶ್ವಾಸವನ್ನು ತೋರಿಸಲಾಗಿದೆ ಎಂದರು.
ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಕೇಳಿ ಗುಂಡಿಕ್ಕಿ ಕೊಂದಿದ್ದು ಮನಸ್ಸು ಕುದಿಯುತ್ತದೆ. ಸಂತೋಷಕ್ಕೆ ಹೋದವರನ್ನು ತಮ್ಮ ಬಂದೂಕಿನಿಂದ ಕುಟುಂಬದ ಕಣ್ಣೆದುರು ಹೊಡೆದ ಕ್ಷಣ ಮರೆಯಲಾಗದು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ನಿರ್ಮೂಲನೆಗೆ ಕೈಗೊಂಡ ನಿರ್ಧಾರ ಮತ್ತಷ್ಟು ಗಟ್ಟಿ ಆಗುವಂತೆ ಮಾಡಿದೆ ಎಂದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಯಾವುದೇ ಪಕ್ಷ, ಧರ್ಮ, ಜಾತಿ ದೃಷ್ಟಿಯಿಂದ ನೋಡದೆ ಭಾರತೀಯ ನಾಗರಿಕರು ಪಾಲ್ಗೊಂಡು ಸೈನಿಕರಿಗೆ ಬೆಂಬಲ ನೀಡಿದ್ದಾರೆ. ಭಾರತೀಯರು ಶಾಂತಿಯುತವಾಗಿ ಇದ್ದರೂ ನಮ್ಮ ಮೇಲೆ ಶತ್ರುಗಳು ದಾಳಿ ಮಾಡಿದಾಗ ಸುಮ್ಮನೇ ಕೂರದೆ ತಕ್ಕ ಉತ್ತರ ನೀಡಲು ಶಕ್ತಿ ಹೊಂದಿದ್ದೇವೆ. ಅಮಾಯಕರನ್ನು ಗುಂಡಿಕ್ಕಿಕೊಂದ ಪಾಕಿಸ್ತಾನದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಬೇಕಿದೆ. ನಮ್ಮ ಸೇನೆ ತಕ್ಕ ಉತ್ತರ ನೀಡಿದೆ ಎಂದರು.
ಶಾಸಕರಾದ ಟಿ.ಎಸ್. ಶ್ರೀವತ್ಸ, ಸಿ.ಎನ್. ಮಂಜೇಗೌಡ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ರಾಜೇಂದ್ರ, ಮಹದೇವಸ್ವಾಮಿ, ಪ್ರಪುಲ್ಲಾ ಮಲ್ಲಾಡಿ, ಎಚ್.ಜಿ. ಗಿರಿಧರ್, ಬಿ.ಎಂ. ರಘು, ಮೋನಿಕಾ, ವಿ. ಶೈಲೇಂದ್ರ, ಪ್ರಮೀಳಾ ಭರತ್, ಎಂ.ಯು. ಸುಬ್ಬಯ್ಯ, ಬಿ.ವಿ. ಮಂಜುನಾಥ್, ವೇದಾವತಿ, ಪ್ರಶಾಂತ್ ಗೌಡ, ಎಂ.ಕೆ. ಶಂಕರ್, ಶಾಂತಮ್ಮ, ಶಾರದಮ್ಮ, ರಂಗಸ್ವಾಮಿ, ಲೋಲಾಕ್ಷಿ ನಾರಾಯಣಪ್ಪ, ಎಸ್. ಸಾತ್ವಿಕ್,ಎಸ್. ಮಹದೇವಯ್ಯ, ಎನ್.ಆರ್.ಕೃಷ್ಣಪ್ಪಗೌಡ, ಎಸ್.ಡಿ. ಮಹೇಂದ್ರ, ರೇಣುಕಾ ರಾಜ್, ಹೇಮಾ ನಂದೀಶ್, ರಾಕೇಶ್ ಗೌಡ ಮೊದಲಾದವರು ಇದ್ದರು.ಜಗತ್ತಿನ ಪ್ರತಿಯೊಂದು ದೇಶವು ಶಾಂತಿಯುತವಾಗಿರಲು ನೋಡಿಕೊಳ್ಳಬೇಕು. ಯಾವುದೇ ದೇಶವಾದರೂ ಶಾಂತಿ ಕಾಪಾಡಿಕೊಂಡು ಕ್ರೌರ್ಯ, ವಿಕೃತ ಮನಸ್ಸುಗಳು ನಡೆಸುವ ಅಮಾಯಕರ ಮಾರಣ ಹೋಮ ಕೆಲಸವನ್ನು ತಡೆಯಬೇಕು.
- ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠಧರ್ಮ ರಕ್ಷಣೆಗೆ ರಾಕ್ಷಸರ ಸಂಹಾರ ಮಾಡಬೇಕು. ಪ್ರಪಂಚದಲ್ಲಿ ಎಲ್ಲರೂ ಒಂದಾಗಿರುವ ದೇಶ ಇದ್ದರೆ ಭಾರತ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ ಹೊಂದಿದೆ. ಭಾರತೀಯರು ಒಂದಾಗಿ ನಿಂತರೇ ಯಾವ ದುಷ್ಟಶಕ್ತಿಯಿಂದಲೂ ಏನನ್ನು ಮಾಡಲಾಗದು.- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠ
ತ್ರಿವರ್ಣ ಧ್ವಜಮಯಸುಮಾರು 1 ಸಾವಿರ ಮೀಟರ್ ಧ್ವಜವನ್ನು ವಿಶೇಷವಾಗಿ ಮಾಡಿಸಿದ್ದರಿಂದ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೈಯಲ್ಲಿ ಹಿಡಿದು ಸಾಗಿದರು. ಈ ಧ್ವಜವನ್ನು ಸಾಲಾಗಿ ಹೆಜ್ಜೆ ಹಾಕುತ್ತಿದ್ದ ವಿದ್ಯಾರ್ಥಿಗಳು ಹಿಡಿದಿದ್ದರಿಂದ ಮೆಟ್ರೋಪೋಲ್ ವೃತ್ತದಿಂದ ಚಿಕ್ಕಗಡಿಯಾರ ವೃತ್ತದವರೆಗೂ ಕಾಣಿಸಿತು. ಹಾಗೆಯೇ, ಡಿ.ದೇವರಾಜ ಅರಸು ರಸ್ತೆಯಲ್ಲಿ ಯಾತ್ರೆ ಸಾಗಿ ಬಂದಾಗ ತ್ರಿವರ್ಣ ಧ್ವಜಗಳನ್ನು ಕಂಡು ಜನ ಸೈನಿಕರಿಗೆ ಗೌರವ ಸಲ್ಲಿಸಿದರು.
ತಿರಂಗಾ ಯಾತ್ರೆಯಲ್ಲಿ ಕಾಲು ನೋವು ಇದ್ದರೂ ಶ್ರೀ ಗಣಪತಿ ಸಚ್ಚಿನಾದಂದ ಸ್ವಾಮೀಜಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಸುತ್ತೂರು ಶ್ರೀಗಳೊಂದಿಗೆ ಸೇರಿ ಒಂದಿಷ್ಟು ದೂರ ನಡೆಯಲು ಬಂದಿದ್ದ ಗಣಪತಿ ಶ್ರೀಗಳು, ತಮ್ಮ ಕಾಲು ನೋವು ಮರೆತು ನಡೆಯುವ ಮೂಲಕ ಇತರರನ್ನು ಹುರಿದುಂಬಿಸಿದರು.