ಹುಬ್ಬಳ್ಳಿ: ಪಾಕಿಸ್ತಾನವನ್ನು ಭಾರತ ಜಗತ್ತಿನಲ್ಲಿ ಏಕಾಂಗಿಯಾಗಿ ಮಾಡಿದೆ. ಇಂಥಹ ಸಂದರ್ಭದಲ್ಲಿ ಭಾರತದಲ್ಲಿರುವ ಕೆಲವರು ಪಾಕಿಸ್ತಾನಕ್ಕೆ ಸಹಕಾರಿಯಾಗುವಂತೆ ಮಾತನಾಡುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷ ಸೈನ್ಯವನ್ನೂ ನಂಬದಿರುವುದು ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಹಿಂದೆ ಪಾಕಿಸ್ತಾನ ಹಿಂದೂ ಟೆರರ್ ಅಂದರೆ ಇಲ್ಲಿಯ ಕಾಂಗ್ರೆಸ್ ನಾಯಕರು ಅದನ್ನೇ ಬಳಸಿದರು. ೩೭೦ ಕಾಯ್ದೆ ತೆಗೆದಾಗ ಪಾಕಿಸ್ತಾನ ಬ್ಲ್ಯಾಕ್ ಡೇ ಎಂದಿತ್ತು. ಇವರು ಸಹ ಬ್ಲ್ಯಾಕ್ ಡೇ ಅಂದಿದ್ದರು. ಕಾಂಗ್ರೆಸ್‌ನ ಕೆಲವು ನಾಯಕರು ಈ ರೀತಿ ಮಾತನಾಡುತ್ತಿದ್ದು, ಕಾಂಗ್ರೆಸ್ ಮಾತನಾಡದಂತೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದರು.
ಕಾಂಗ್ರೆಸ್ ಅನೇಕ ನಾಯಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರ ಮನೆಗಳ ಟಾರ್ಗೆಟ್ ಮಾಡಿ ಹೊಡೆಯಲಾಗಿದೆ. ಭಾರತದ ಗುಪ್ತಚರ ಇಲಾಖೆ, ತಂತ್ರಜ್ಞಾನ, ಸೈನ್ಯ, ವಾಯುವ ಸೇನೆ, ಜಲ ಸೇನೆ ಸಮನ್ವದಿಂದ ಕಾರ್ಯಾಚರಣೆ ಮಾಡಿದ್ದು, ನಿಜಕ್ಕೂ ಮೆಚ್ಚುವಂತದ್ದು. ಉಗ್ರರ ಅಡಗುತಾಣವನ್ನು ಗುರಿಯಾಗಿ ಹೊಡೆಯಲಾಗಿದೆ. ನಾಗರಿಕರ ಮೇಲೆ ದಾಳಿ ಮಾಡಿಲ್ಲ, ಇದನ್ನು ಪಾಕಿಸ್ತಾನದವರು ಅಳುತ್ತ ಹೇಳುತ್ತಿದ್ದಾರೆ. ಭಾರತವನ್ನು ತಡೆಯಬೇಕು ಎಂದು ಅಮೇರಿಕದವರ ಕಾಲು ಬಿದ್ದಿದ್ದಾರೆ.ಆದರೆ, ಕಾಂಗ್ರೆಸ್ ನಾಯಕರಿಗೆ ಸೈನ್ಯದ ಮೇಲೆ ಅನುಮಾನವಿದೆ. ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಹಾಗೂ ಈಗ ಕೊನೆಗೆ ಸೈನ್ಯವನ್ನು ನಂಬುತ್ತಿಲ್ಲ. ಸೈನ್ಯದ ಅಧಿಕಾರಿಗಳು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ನಾನು ದೊಡ್ಡವನು ಎಂಬ ಭ್ರಮೆಯಲ್ಲಿ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾ ಅಧ್ಯಕ್ಷ ಟ್ರಂಪ್ ಬಗ್ಗೆ ಮಾತನಾಡಿ ನಾನು ಡೊಡ್ಡವನು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಜನರಿಗೆ ದೊಡ್ಡವನು ಎಂದು ತೋರಿಸುವ ಮಾನಸಿಕ ಸ್ಥಿತಿಯಿಂದ ಬಳಲುತ್ತಿದ್ದಾರೆ. ರಾಜ್ಯ, ಜಿಲ್ಲೆ ಅಭಿವೃದ್ಧಿ ಹಾಗೂ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ಒಂದು ಬಾರಿ ಮಾತನಾಡಲ್ಲ. ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಹರಿಹಾಯ್ದರು.
ಕರ್ನಲ್ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವ ವಿಜಯ್ ಶಾಹ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಪಕ್ಷ ಸೂಕ್ತ ಕ್ರಮ ಕೈಗೊಂಡಿದೆ ಎಂದರು.