ಗದಗ: ಗ್ರಾಮೀಣ ಸೊಗಡಿನ ಪರಂಪರೆಯಾದ ಕುಸ್ತಿ ಕಲೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಅತ್ಯುತ್ತಮ ಕ್ರೀಡೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಿಳಿಸಿದರು.
ಕುಸ್ತಿ ಕೇವಲ ಕ್ರೀಡೆಯಲ್ಲ, ಶಿಸ್ತು, ಧೈರ್ಯ, ದೈಹಿಕ ಸದೃಢತೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಮಹತ್ವದ ಪರಂಪರೆಯಾಗಿದೆ. ಇಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮೂಲಕ ಯುವಜನರಲ್ಲಿ ಆರೋಗ್ಯಕರ ಬದುಕಿನ ಬಗ್ಗೆ ಅರಿವು ಮೂಡಿಸಬಹುದು. ಸಮಿತಿ ಪ್ರತಿವರ್ಷ ಈ ಪಂದ್ಯಾವಳಿಯನ್ನು ಏರ್ಪಡಿಸುತ್ತ ಬಂದಿರುವುದು ಅಭಿನಂದನೀಯ ಎಂದರು.
ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಪಂದ್ಯಾವಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಗದಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಹೆಸರಾಂತ ಕುಸ್ತಿಪಟುಗಳು ಭಾಗವಹಿಸಿರುವುದು ವಿಶೇಷ ಎಂದರು.ಪಂದ್ಯಾವಳಿಯ ಯಶಸ್ವಿಗಾಗಿ ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ, ಉಪಾಧ್ಯಕ್ಷ ಮಕ್ತುಂಸಾಬ ನಾಗನೂರ, ಕಾರ್ಯದರ್ಶಿ ಇಮಾಮಸಾಬ ರೋಣದ, ಖಜಾಂಚಿ ಶಂಕ್ರಪ್ಪ ಯರಗುಡಿ, ಕರ್ನಾಟಕ ರಾಜ್ಯ ಹಮಾಲರ ಒಕ್ಕೂಟದ ರಾಜ್ಯ ಅಧ್ಯಕ್ಷ ಅಯ್ಯಪ್ಪ ನಾಯ್ಕರ್ ಸೇರಿದಂತೆ ಮಮ್ಮುಸಾಬ ವಾಲೀಕಾರ, ಇಮಾಮಹುಸೇನ ರೋಣದ, ರಾಜೇಸಾಬ ಕಣವಿ ಮಾರ್ಗದರ್ಶನ ನೀಡಿದರು.
ಹಿರಿಯ ಅನುಭವಿ ಪೈಲ್ವಾನರು ಹಾಗೂ ನಿರ್ಣಾಯಕರ ಮಾರ್ಗದರ್ಶನದಲ್ಲಿ ಪಂದ್ಯಗಳು ಶಿಸ್ತಿನಿಂದ ನಡೆದವು. ಜಾತ್ರೆಗೆ ಆಗಮಿಸಿದ್ದ ಭಕ್ತರು ಹಾಗೂ ಕುಸ್ತಿಪ್ರೇಮಿಗಳು ಪಂದ್ಯಾವಳಿಯನ್ನು ಆಸಕ್ತಿಯಿಂದ ವೀಕ್ಷಿಸಿದರು.