ಶಿವಮೊಗ್ಗ: ಪ್ರೊ.ಬಿ.ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ದಲಿತ ಸಂಘರ್ಷ ಸಮಿತಿ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.
ಪ್ರೊ.ಕೃಷ್ಣಪ್ಪ ಅಂಬೇಡ್ಕರ್ ಆಲೋಚನೆಗಳನ್ನೇ ಮುಂದಿಟ್ಟುಕೊಂಡು ಶಿಕ್ಷಣ ಸಂಘಟನೆ ಹೋರಾಟದ ದಸಂಸ ಅನ್ನು ಕಟ್ಟಿದರು. ಆ ಮೂಲಕ ಸಮ ಸಮಾಜದ ಹೋರಾಟಗಳನ್ನು ನಡೆಸುತ್ತ ಬಂದರು. ಅವರು ನಾನು ಹೋರಾಟದ ಹಣತೆಯನ್ನು ಹಚ್ಚಿದ್ದೇನೆ. ಅದು ಆರದಂತೆ ನೋಡಿಕೊಳ್ಳಿ ಎಂದಿದ್ದರು. ಹಾಗಾಗಿ ದಲಿತ ಸಂಘರ್ಷ ಸಮಿತಿಗಳು ತಮ್ಮ ಹೋರಾಟಗಳನ್ನು ಮುಂದುವರಿಸಿ ಗಟ್ಟಿ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದರು.
ಡಾ. ಅಂಬೇಡ್ಕರ್ ಈ ದೇಶದ ದಲಿತರ ಬೆಳಕಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ಇಂದು ಎಲ್ಲಾ ಧರ್ಮಗಳಿಗೂ ಪವಿತ್ರ ಗ್ರಂಥವೇ ಆಗಿದೆ. ದಲಿತ ಸಂಘರ್ಷ ಸಮಿತಿಯ ಹೋರಾಟಗಾರರು ಅಂಬೇಡ್ಕರ್‌ರವರ ಚಿಂತನೆ ಮತ್ತು ವಿಚಾರಗಳನ್ನು ಇಟ್ಟುಕೊಂಡು ಸಂಘಟನೆ ಮತ್ತು ಶಿಕ್ಷಣದ ಮೂಲಕ ತಮ್ಮ ಹೋರಾಟಗಳನ್ನು ವಿಸ್ತರಿಸಬೇಕು ಎಂದರು.ಕರ್ನಾಟಕ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಬಿ.ಎಲ್.ರಾಜು ಮಾತನಾಡಿ, ದಲಿತರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರವೂ ಭೂಮಿಗಾಗಿಯೇ ಹೋರಾಟ ನಡೆಸುತ್ತ ಬಂದಿದ್ದಾರೆ. ಪ್ರೊ.ಬಿ.ಕೃಷ್ಣಪ್ಪ ಅವರು ಕೂಡ ದಲಿತರಿಗೆ ಭೂಮಿ ಬೇಕು ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿದರು. ಆದರೆ, ಇಂದೂ ಕೂಡ ದಲಿತರು ಅದೇ ಪ್ರಶ್ನೆಯನ್ನು ಇಟ್ಟುಕೊಂಡು ಹೋರಾಟ ಮಾಡಬೇಕಾದ ಅನಿವಾರ್ಯತೆ ಇರುವುದು ಅತ್ಯಂತ ದುರದೃಷ್ಟಕರ ಎಂದರು.
ದಸಂಸನ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ಶತಮಾನಗಳಿಂದಲೂ ಉಳ್ಳವರೇ ಬಡವರ ರಕ್ತವನ್ನು ಹೀರಿ ಭೂಮಿ, ಬಂಡವಾಳ, ಅಧಿಕಾರಗಳನ್ನು ಪಿತ್ರಾರ್ಜಿತ ಆಸ್ತಿಯಂತೆ ಶತಮಾನಗಳಿಂದಲೂ ಅನುಭವಿಸುತ್ತ ಬಂದಿದ್ದಾರೆ. ದಲಿತ ಸಮುದಾಯಗಳಲ್ಲಿ ಬಂಡಾಯದ ಕಿಚ್ಚನ್ನು ಹಚ್ಚಿಸಿ ಸಮ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ ಎಂದರು.