ಗದಗ: ಉಪ್ಪಾರ ಸಮಾಜವು ಅತ್ಯಂತ ಸಣ್ಣಸಮಾಜವಾಗಿದ್ದು, ಸಮಾಜದಲ್ಲಿನ ವಿದ್ಯಾವಂತರು, ಶಿಕ್ಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಮುಟ್ಟಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.
ಮಹರ್ಷಿ ಭಗೀರಥರು ತಮ್ಮ ಅಪಾರ ಪರಿಶ್ರಮದಿಂದ ಭೂಮಿಗೆ ಗಂಗೆಯ ನೀರನ್ನು ತಂದಂತಹ ಮಹಾನ್ ಸಾಧನೆ ಮಾಡಿದ್ದಾರೆ. ಪ್ರಯತ್ನವೇ ಯಶಸ್ಸಿಗೆ ದಾರಿ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ಅದರೊಂದಿಗೆ, ಸಮಾಜದ ಮಕ್ಕಳನ್ನು ಉತ್ತಮ ಶಿಕ್ಷಣದತ್ತ ಉತ್ತೇಜಿಸುವ ಅಗತ್ಯವಿದೆ. ಸಾಮಾಜಿಕ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಶಿಕ್ಷಣವೇ ಶಕ್ತಿ. ಅದನ್ನು ಸದುಪಯೋಗ ಪಡಿಸಿಕೊಂಡರೆ, ಸಮಾಜ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಬಹುದಾಗಿದೆ.
ಡಾ.ಎಪಿಜೆ ಅಬ್ದುಲ್ ಕಲಾಂ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದ ಶಕ್ತಿ ಏನೆಂಬುದನ್ನು ನಮಗೆಲ್ಲಾ ತೋರಿಸಿ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದರು. ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ್ ಅವರು ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಹರ್ಷಿ ಭಗೀರಥರ ವ್ಯಕ್ತಿತ್ವ ಮತ್ತು ಕೊಡುಗೆ ಕುರಿತು ಮಂಜುನಾಥ ಹುಯಿಲಗೋಳ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಭೀಮನಗೌಡ ಪಾಟೀಲ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಹಿರಿಯರಾದ ಹನುಮಂತಪ್ಪ ಗರಗ, ಉಪ್ಪಾರ ಸಂಘದ ಗೌರವಾಧ್ಯಕ್ಷ ಅನಿಲ ಗರಗ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್. ಬುರುಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಉಪ್ಪಾರ ಸಮಾಜದ ಹಿರಿಯರು ಹಾಗೂ ಮುಖಂಡರು ಯುವಕರು ಮಹಿಳೆಯರು ಉಪಸ್ಥಿತರಿದ್ದರು.