ಏಕನಾಥ ಮೆದಿಕೇರಿ
ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದ ಸಾಹಿತಿ ಪರಮೇಶ್ವರ ವೇದಿಕೆಯಲ್ಲಿ ಶನಿವಾರ ಕುಷ್ಟಗಿ ತಾಲೂಕು ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಾಣವಾಗಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಕ್ಕು ಡಾ: ಮಹಿಷಿ ವರದಿ ಜಾರಿಯಾಗಬೇಕು. ಶಾಸ್ತ್ರೀಯ ಭಾಷೆ ಕನ್ನಡಕ್ಕೆ ಹೇರಳವಾಗಿ ಅನುದಾನ ಬರಬೇಕು. ದೂರದ ಬೆಂಗಳೂರಿನ ಗ್ರಂಥಾಲಯಕ್ಕೆ ಪುಸ್ತಕ ತಲುಪಿಸುವ ಬದಲು ಜಿಲ್ಲೆಯ ಗ್ರಂಥಾಲಯಗಳಿಗೆ ವಿತರಿಸುವ ವ್ಯವಸ್ಥೆಯಾಗಬೇಕು. ಪುರದ ಸೋಮೇಶ್ವರ ಹಾಗೂ ಹನುಮಸಾಗರದ ಚಂದಾಲಿಂಗೇಶ್ವರ ಕಬ್ಬರಗಿ ಕಪಿಲ ತೀರ್ಥ ಪ್ರವಾಸಿ ಕೇಂದ್ರಗಳನ್ನಾಗಿ ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಶೈಕ್ಷಣಿಕವಾಗಿ ನಮ್ಮ ತಾಲೂಕು ಹಿಂದುಳಿದಿದೆ. ಹನುಮಸಾಗರ ಮತ್ತು ತಾವರಗೇರಾದಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯಗಳಿಲ್ಲ. ಐವತ್ತು ವರ್ಷದ ಹಿಂದೆ ಪ್ರಸ್ತಾವನೆಯಲ್ಲಿದ್ದ ಗದಗ- ವಾಡಿ ರೈಲು ಸಂಚಾರ ಸ್ಥಗಿತಗೊಂಡು ಗದಗ, ನರೇಗಲ್ಲ, ಗಜೇಂದ್ರಗಡ, ಹನುಮಸಾಗರ, ಇಳಕಲ್ಲ ಪಟ್ಟಣಗಳ ಜನತೆಗೆ ರೈಲು ಸಂಚಾರ ಗಗನಕುಸುಮವಾಗಿದೆ. ತಾಲೂಕಿನಲ್ಲಿ ಹನುಮಸಾಗರ ಸಾಂಸ್ಕೃತಿಕ ನಗರವಾಗಿದ್ದರೂ ರಂಗಮಂದಿರಗಳಿಲ್ಲ. ಹನುಮಸಾಗರ ಮತ್ತು ತಾವರಗೇರಿ ತಾಲೂಕು ಕೇಂದ್ರಗಳಾಗಿ ಜನರ ಬದುಕಿಗೆ ಆಶ್ರಯವಾಗಬೇಕಿದೆ. ಹೀಗೆ ಸಾವಿರಾರೂ ಸಮಸ್ಯೆಗಳು ಏನೇ ಇದ್ದರೂ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಿರಿವಂತಿಕೆ ನೆಮ್ಮದೆನ್ನುವ ಅಭಿಮಾನ ನಮ್ಮಲ್ಲಿ ಅಂಕುರಗೊಂಡಿದೆ ಎಂದು ಹೇಳಿದರು.ಪ್ರಾಚೀನ ಕಾಲದಿಂದ ಸಮಕಾಲಿನ ಸಂದರ್ಭದ ವರೆಗೂ ಕಾಲದ ಅಗತ್ಯತೆಗೆ ಅನುಗುಣವಾಗಿ ನಮ್ಮ ಜಿಲ್ಲೆ ಮತ್ತು ನಮ್ಮ ತಾಲೂಕಿನ ಲೇಖಕರು, ಬರಹಗಾರರು ತಮ್ಮ ಅಭಿವ್ಯಕ್ತಿಯನ್ನು ಜೀವಂತವಾಗಿರಿಸಿದ್ದಾರೆ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಮ್ಮ ಒಡಲಾಳದಲ್ಲಿ ತುಂಬಿಕೊಂಡು ಸಂಸ್ಕಾರಗೊಳಿಸಿ ಬೌದ್ಧ, ಜೈನ, ಶೈವ ಮುಂತಾದ ಧರ್ಮಗಳ ನೆಲೆಯಾಗಿಸಿಕೊಂಡು ಅಪಾರ ಐತಿಹಾಸಿಕ, ಶೈಕ್ಷಣಿಕ ಸಾಮಾಜಿಕ, ಸಾಂಸ್ಕೃತಿಕ ಪರಂಪರೆಯ ಉನ್ನತಿಗೆ ಕಾರಣವಾದ ಇಲ್ಲಿನ ಕಾವ್ಯ ಕುರಿತು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅತಿ ವೇಗವಾಗಿ ಜನರ ನಾಡಿಮಿಡಿತವನ್ನು ಬಡಿದೆಬ್ಬಿಸುವ ಸಹಜ ಸಾಹಿತ್ಯವೆಂದರೆ, ಚುಟುಕು ಸಾಹಿತ್ಯ; ನೂರಾರು ಕಥೆ, ಕಾದಂಬರಿ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು, ಸಂಶೋಧನಾ ಗ್ರಂಥಗಳನ್ನು ರಚಿಸಿದರೂ, ಹಿರಿದಾದ ಅರ್ಥವನ್ನು ಕಿರಿದಾದ ಪದಗಳಲ್ಲಿ ವಿಶ್ಲೇಷಣೆ ಮಾಡುವುದು ಸರಳ ಮಾತಲ್ಲ! ಚುಟುಕು ಸಾಹಿತ್ಯವು ಕಡಿಮೆ ಪದಗಳಲ್ಲಿ ಗಂಭೀರವಾದ ವಿಚಾರ ಜೀವನಾನುಭವ ಸಾಮಾಜಿಕ ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅಮೂಲ್ಯ ಸಾಹಿತ್ಯ ಪ್ರಕಾರವಾಗಿದೆ. ಇಂತಹ ಸಾಹಿತ್ಯದ ಬೆಳವಣಿಗೆಗೆ ವೇದಿಕೆ ಕಲ್ಪಿಸುವ ಈ ಚುಟುಕು ಸಾಹಿತ್ಯ ಸಮ್ಮೇಳನವು ನಮ್ಮೆಲ್ಲರ ಹೆಮ್ಮೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ. ಕಾಲ ಬದಲಾಗುತ್ತಿದೆ ಎಂಬ ಕಾರಣಕ್ಕೆ ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಮರೆಯಬಾರದು. ಮಕ್ಕಳಲ್ಲಿ ಓದುವ ಅಭ್ಯಾಸ ಹಾಗೂ ಸಾಹಿತ್ಯದ ಆಸಕ್ತಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.