ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ತೊಂದರೆ ಆಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದ್ದಾರೆ.
- ರೈತರಿಗೆ ರಸಗೊಬ್ಬರ, ಬಿತ್ತನೆಬೀಜ ನಿಗದಿತ ದರದಲ್ಲಿ ಪೂರೈಸಿ: ಶಾಸಕ ಬಸವಂತಪ್ಪ ಸೂಚನೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ತೊಂದರೆ ಆಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದರು.
ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಮುಂಗಾರು ಸಿದ್ಧತೆ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮುಂಗಾರು ಮಳೆ ಕ್ಷೀಣಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ನೀರು ಮತ್ತು ಮಳೆ ಕೊರತೆಯಿಂದ ಪ್ರದೇಶಗಳಲ್ಲಿ ರಾಗಿ, ನವಣೆ, ಸಜ್ಜೆ, ಬರಗು ಮತ್ತು ಸಾಮೆ ಮುಂತಾದ ಸಿರಿಧಾನ್ಯಗಳನ್ನು ಬೆಳೆಯಬಹುದು. ಇವು ಕಡಿಮೆ ನೀರಿನಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಬೆಳೆಯಬಲ್ಲವು ಎಂದು ತಿಳಿಸಿದರು.
ರೈತರು ಒಂದೇ ಬೆಳೆಯನ್ನೇ ನಂಬಿಕೊಳ್ಳದೇ, ಮಳೆಯ ಲಭ್ಯತೆಗೆ ಅನುಗುಣವಾಗಿ ಮಿಶ್ರಬೆಳೆ ಅಥವಾ ಸಾಲುಬೆಳೆ ಪದ್ಧತಿಯನ್ನು ಅನುಸರಿಸುವುದು ಕೃಷಿಯಲ್ಲಿ ನಷ್ಟವನ್ನು ತಪ್ಪಿಸುತ್ತದೆ. ಈ ನಿಟ್ಟಿನಲ್ಲಿ ರೈತರು ಆಲೋಚನೆ ಮಾಡಬೇಕು. ಈ ಬಗ್ಗೆ ಕೃಷಿ ಇಲಾಖೆಯಿಂದ ಜನಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು ಹೇಳಿದರು.
ರಾಜ್ಯ ಸರ್ಕಾರವು ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ‘ರೈತಸಿರಿ’ಯಂತಹ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಸೊಸೈಟಿಗಳ ಮೂಲಕ ರಸಗೊಬ್ಬರ, ಬೀಜ ವಿತರಿಸಿ:
ಮುಂಗಾರು ಹಂಗಾಮು ಆರಂಭ ಆಗುತ್ತಿರುವುದರಿಂದ ರಸಗೊಬ್ಬರ, ಬಿತ್ತನೆ ಬೀಜದ ಬೇಡಿಕೆ ಹೆಚ್ಚಾಗಲಿದೆ. ಯಾವುದೇ ರೀತಿಯ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲಾ ಸಹಕಾರ ಸಂಘಗಳ (ಸೊಸೈಟಿ) ಮುಖಾಂತರವೇ ರಸಗೊಬ್ಬರ ವಿತರಣೆ ಮಾಡಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸಗೊಬ್ಬರ ಖರೀದಿಗೆ ಹಿಂದೇಟು ಹಾಕುವ ಸೊಸೈಟಿಗಳನ್ನು ಡಿಆರ್ ಹಾಗೂ ಎಆರ್ ಮುಖಾಂತರ ಖುದ್ದಾಗಿ ಭೇಟಿ ಮಾಡಿ, ಅವರು ರಸಗೊಬ್ಬರ ದಾಸ್ತಾನು ಮಾಡುವಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಫೆಡರೇಷನ್ ಹಾಗೂ ಕೃಷಿ ಇಲಾಖೆಯ ದಾಸ್ತಾನು ಮಳಿಗೆಗಳಲ್ಲಿ ಕಡ್ಡಾಯವಾಗಿ ಅಗತ್ಯ ಪ್ರಮಾಣದ ಗೊಬ್ಬರ ಸಂಗ್ರಹ ಇರಬೇಕು ಎಂದು ಸೂಚಿಸಿದರು.
ಯೂರಿಯಾ ಕೃತಕ ಅಭಾವಕ್ಕೆ ಬ್ರೇಕ್:
ಮಳೆ ಅಭಾವದ ಸಂದರ್ಭದಲ್ಲಿ ರೈತರು ಒಮ್ಮೆಲೇ ಬಿತ್ತನೆ ಮಾಡಿದಾಗ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ. ಇದನ್ನು ಬಂಡವಾಳ ಮಾಡಿಕೊಂಡು ಖಾಸಗಿ ಏಜೆನ್ಸಿಗಳು ಕೃತಕ ಅಭಾವ ಸೃಷ್ಟಿಸುವ ಸಾಧ್ಯತೆ ಇರುತ್ತದೆ. ಇಂತಹ ಅಕ್ರಮಗಳನ್ನು ತಡೆಯಲು ವಿಜಿಲೆನ್ಸ್ (ಜಾಗೃತ ದಳ) ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗಳು ಬೇಜವಾಬ್ದಾರಿತನ ತೋರಬಾರದು ಹಾಗೂ ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಬಾರದು. ಒಂದುವೇಳೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಕಲಿ ಬಿತ್ತನೆ ಬೀಜ- ಬೋಗಸ್ ವಿಮೆ ತಡೆಗೆ ಕ್ರಮ:
ನೆರೆ ಜಿಲ್ಲೆಗಳಾದ ರಾಯಚೂರು ಅಥವಾ ಇತರೆ ಭಾಗಗಳಿಂದ ಬಿಲ್ ಇಲ್ಲದೆ ತಂದು ಮಾರಾಟ ಮಾಡುವ ಲೂಸ್ (ಬಿಡಿ) ಬಿತ್ತನೆ ಬೀಜಗಳಿಂದ ರೈತರು ಮೋಸ ಹೋಗುತ್ತಿದ್ದಾರೆ. ಅನಂತರ ಬೆಳೆ ನಷ್ಟವಾಯಿತೆಂದು ರೈತರು ಕಷ್ಟ ಪಡುವುದನ್ನು ತಪ್ಪಿಸಲು, ಬಿಲ್ ಇಲ್ಲದ ಬಿತ್ತನೆ ಬೀಜ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಅದೇ ರೀತಿ, ಬೆಳೆ ವಿಮೆ ಪಾವತಿಯಲ್ಲಿ ಕೆಲವೆಡೆ ನಡೆಯುತ್ತಿರುವ ಬೋಗಸ್ ಧಂದೆಗಳ ಬಗ್ಗೆಯೂ ದೂರುಗಳು ಕೇಳಿಬಂದಿವೆ. ಇಂತಹ ಯಾವುದೇ ಬೋಗಸ್ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾವಹಿಸಿ, ಅರ್ಹ ರೈತರಿಗೆ ವಿಮಾ ಸೌಲಭ್ಯ ಸಿಗುವಂತೆ ಪಾರದರ್ಶಕ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಜಂಟಿ ನಿರ್ದೇಶಕ ಕೆ.ಜಿಯಾವುಲ್ಲಾ, ಉಪನಿರ್ದೇಶಕ ಭಾರತಮ್ಮ, ಸಹಾಯಕ ನಿರ್ದೇಶಕ ಶ್ರೀಧರ್‌ಮೂರ್ತಿ, ಕೃಷಿ ಅಧಿಕಾರಿ ಚಂದ್ರಪ್ಪ, ಚಂದ್ರಪ್ಪ, ಬೀರಪ್ಪ, ಎಂಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಣ್ಣ, ಆನಗೋಡು ಕರಿಬಸಪ್ಪ, ತಾಲೂಕುಮಟ್ಟದ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.
- - -
-21ಕೆಡಿವಿಜಿ38:
ದಾವಣಗೆರೆ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ಮುಂಗಾರು ಸಿದ್ಧತೆ ಕುರಿತು ಸಭೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.