ಕುಡಿಯುವ ನೀರಿನ ಅಭಾವ ಉಂಟಾಗದಿರಲಿ

KannadaprabhaNewsNetwork |  
Published : Mar 30, 2025, 03:02 AM IST
ಅಶೋಕ ಪಟ್ಟಣ ಮಾತನಾಡಿದರು. | Kannada Prabha

ಸಾರಾಂಶ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ. ಕೇಂದ್ರ ಸ್ಥಾನದಲ್ಲಿದ್ದು ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಅಭಾವವಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಬೇಸಿಗೆ ಕಾಲದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದ್ದು ತಾಲೂಕಿನ ಯಾವುದೇ ಜನವಸತಿ ಪ್ರದೇಶದಲ್ಲಿ ಜನರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ಅಶೋಕ ಪಟ್ಟಣ ಅಧಿಕಾರಿಗಳಿಗೆ ಸೂಚಿಸಿದರು.ಶನಿವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಟಾಸ್ಕಪೊರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ. ಕೇಂದ್ರ ಸ್ಥಾನದಲ್ಲಿದ್ದು ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಅಭಾವವಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ತಾಲೂಕಿನಲ್ಲಿ ಎಲ್ಲ 37 ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ನಿರ್ದೇಶನದಂತೆ ಪ್ರತಿ ಪಂಚಾಯತಿಗೆ ನೀರು ಪೂರೈಕೆಗೆ ಟ್ಯಾಂಕರ್ ಖರೀದಿಗೆ ಅನುದಾನ ನೀಡಲಾಗಿದೆ. ಆದರೂ ಸಹಿತ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಘಟಕಗಳಿಗೆ ಮಲಪ್ರಭಾ ಮತ್ತು ಘಟಪ್ರಭಾ ನದಿಗಳಿಗೆ ನೀರು ಬಿಟ್ಟರೆ ತೊಂದರೆಯಾಗುವುದಿಲ್ಲ ಎಂದು ಟ್ಯಾಂಕರ್ ಖರೀದಿ ಮಾಡದೇ ಬೇರೆ ಬೇರೆ ಕೆಲಸಕ್ಕೆ ಹಣವಿನಿಯೋಗ ಮಾಡಿರುವುದು ಸರಿಯಲ್ಲ. ಇದನ್ನು ಪಂಚಾಯಿತಿ ಅಧ್ಯಕ್ಷರ ಹೆಸರು ಮುನ್ನೆಲೆಗೆ ತರಬೇಡಿ. ಎಷ್ಟೋ ಕಾಮಗಾರಿ ಮತ್ತು ಅನುದಾನವನ್ನು ಅಧ್ಯಕ್ಷರ ಗಮನಕ್ಕೆ ಬಾರದೆ ವೆಚ್ಚ ಮಾಡಿದ್ದು ಕೂಡಾ ಗಮನಕ್ಕೆ ಬಂದಿದೆ. ಯಾವ ಪಂಚಾಯಿತಿ ಅಧಿಕಾರಿಗಳು ನೀರಿನ ಟ್ಯಾಂಕರ್ ಖರೀದಿ ಮಾಡಿಲ್ಲವೋ ಅವರು ತಕ್ಷಣ ಖರೀದಿ ಮಾಡುವಂತೆ ಸೂಚನೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶ್ರೀನಿವಾಸ ವಿಶ್ವಕರ್ಮ ಮಾತನಾಡಿ, ಇಲ್ಲಿಯವರೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗಿಲ್ಲ. ನವೀಲು ತೀರ್ಥ ಅಣೆಕಟ್ಟಿನಿಂದ ಮಲಪ್ರಭಾ ನದಿಗೆ ಏ.1ರಿಂದ 13ರವರಗೆ 1ಟಿಎಂಸಿ ನೀರು ಹರಿ ಬಿಡಲಾಗುತ್ತಿದೆ ಮತ್ತು ಈಗಾಗಲೇ ಘಟಪ್ರಭಾ ನದಿಗೆ ನೀರು ಬಿಟ್ಟಿದ್ದು ಏಪ್ರಿಲ್ ಅಂತ್ಯದ ವರಗೆ ತಾಲೂಕಿನ ಯಾವುದೇ ಜನವಸತಿಗೆ ಕುಡಿಯುವ ನೀರು ಪೂರೈಕೆಗೆ ತೊಂದರೆಯಿಲ್ಲ. ಆದರೆ ಮಲಪ್ರಭಾ ನದಿಗೆ ನಿರ್ಮಾಣ ಮಾಡಿರುವ ಬ್ರಿಜ್ ಕಂ ಬ್ಯಾರೇಜ್ ಹತ್ತಿರ ರೈತರು ಬೆಳೆಗಳಿಗೆ ಪಂಪಸೆಟ್ ಮೂಲಕ ನೀರು ಎತ್ತುವುದರಿಂದ ಕಡಿಮೆ ದಿನ ನೀರು ಲಭ್ಯವಾಗುತ್ತದೆ. ಇದಕ್ಕೆ ಹೆಸ್ಕಾಂ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ವಿನಂತಿಸಿದಾಗ ಹೆಸ್ಕಾಂ ಅಧಿಕಾರಿಗಳು ತಹಸೀಲ್ದಾರ್‌ ಸಹಕಾರದಿಂದ ಕೆಲಸ ಮಾಡುವ ಭರವಸೆ ನೀಡಿದರು.

ಟಾಸ್ಕಪೋರ್ಸ್‌ಗೆ ಕುಡಿಯುವ ನೀರು ಪೂರೈಕೆಗೆ ₹48 ಲಕ್ಷ ಅನುದಾನ ಲಭ್ಯವಿದೆ. ತೀವ್ರ ಅಗತ್ಯವಿರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಲಾಗುವುದು ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದಾಗ ಶಾಸಕರು ಖಾಸಗಿ ಕೊಳವೆಬಾವಿ ಮೇಲೆ ಅವಲಂಬಿಸದೆ ಅನುದಾನದಲ್ಲಿ ಸರ್ಕಾರವೇ ಕೊಳವೆಬಾವಿ ಕೊರೆಯಲಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಸೇರಿದಂತೆ ನೋಡಲ್ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳತಾಧಿಕಾರಿಗಳು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌