ಗದಗ: ಮಕ್ಕಳು ಗುಣಾತ್ಮಕ ಫಲಿತಾಂಶದೊಂದಿಗೆ ಯಶಸ್ಸು ಗಳಿಸಲಿ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಮುಖ್ಯ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಮಗುವಾರು ಟ್ರ್ಯಾಕಿಂಗ್ ವ್ಯವಸ್ಥೆ ಅಡಿಯಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ವಿಷಯವಾರು ನಿಖರವಾಗಿ ಗುರುತಿಸಿ, ಪರೀಕ್ಷೆಗಳ ಆಧಾರದ ಮೇಲೆ ನಿರಂತರವಾಗಿ ಟ್ರಾಕಿಂಗ್ ನಡೆಸಬೇಕು.
ವಿದ್ಯಾರ್ಥಿಗಳನ್ನು ಸಾಮರ್ಥ್ಯಾನುಸಾರ ಗುಂಪು ಮಾಡಿ ಅಗತ್ಯ ಕ್ರಮ ಕೈಗೊಂಡು ಮೌಲ್ಯಮಾಪನ ಮಾಡಿ ಪೋಷಕರ ಸಭೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಗಮನಿಸಿದ ತಪ್ಪನ್ನು ಸರಿ ಪಡಿಸಿ ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಸತತ ಪ್ರಯತ್ನ ನಿಮ್ಮದಾಗಿರಲಿ ಎಂದರುಓದು- ಬರಹದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿದಿನ ನಿಗದಿತ ಸಮಯದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ನಿಧಾನ ಕಲಿಕೆಯ ಹಾಗೂ NC ವಿದ್ಯಾರ್ಥಿಗಳಿಗೆ, ವಿಶೇಷ ಗಮನ ಹರಿಸಿ ಇಲಾಖೆ ನೀಡಿದ ತರಬೇತಿ ಹಾಗೂ ಮಾರ್ಗದಶನದಂತೆ ಕನಿಷ್ಠ 40+ ಅಂಕ ಗಳಿಸುವಂತೆ ವಿಶೇಷ ತರಗತಿಗಳು, ಪುನರಾವಲೋಕನ, ಗುಂಪು ಚಟುವಟಿಕೆ ಹಾಗೂ ಮೇಧಾವಿ ವಿದ್ಯಾರ್ಥಿಗಳಿಗೆ ಅಪ್ಲೈಡ್ ಪ್ರಶ್ನೆಗಳ ಅಭ್ಯಾಸಕ್ಕೆ ಒತ್ತು ನೀಡುವಂತೆ ಸೂಚನೆ ನೀಡಿದರು.
ವಿಶೇಷವಾಗಿ ಜಿಲ್ಲೆಯಲ್ಲಿ ಈಗಾಗಲೇ 41 ಶಾಲೆಗಳಲ್ಲಿ ಓದುವ ಮನೆ ಪ್ರಾರಂಭಿಸಿದ್ದು ಸಂತೋಷದ ವಿಷಯ. ಬಾಲಕರ ಕಲಿಕೆ ಹಾಗೂ ಫಲಿತಾಂಶ ಹೆಚ್ಚಿಸಲು ಓದಿನಮನೆ ಹೆಚ್ಚು ಸಹಕಾರಿಯಾಗಲಿದೆ. ಶಿಕ್ಷಕರ ಅರ್ಪಣಾ ಮನೋಭಾವದ ದುಡಿಮೆ ಹಾಗೂ ಮಕ್ಕಳ ನಿರಂತರ ಹಾಜರಾತಿ ಹಾಗೂ ಕಲಿಕೆಯು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ.ನಮ್ಮೆಲ್ಲರ ಪ್ರಯತ್ನ ಕೇವಲ ಮಕ್ಕಳ ಉತ್ತೀರ್ಣತೆಗಷ್ಟೇ ಸೀಮಿತವಾಗದೆ, ಎಲ್ಲ ವಿದ್ಯಾರ್ಥಿಗಳು ಗುಣಾತ್ಮಕ ಕಲಿಕೆಯನ್ನು ಹೊಂದುವಂತೆ ಪ್ರಯತ್ನಿಸೋಣ. ಸರ್ಕಾರದಿಂದ ನೀಡಿದ 29 ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ಫಲಿತಾಂಶವನ್ನು ಶೇ. 100ಕ್ಕೆ ತಲುಪಿಸುವಂತೆ ಎಲ್ಲರೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್. ಬುರಡಿ, ಎಸ್.ಎಸ್. ಕುರಿಯವರ, ಎಂ.ಎಚ್. ಸವದತ್ತಿ ಸೇರಿದಂತೆ ಇತರರು ಇದ್ದರು.