ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಉತ್ಸಾಹಕರವಾದ, ಬವಣೆ ರಹಿತ ನಿವೃತ್ತಿ ಜೀವನ ನಮ್ಮದಾಗಬೇಕು. ನಿನ್ನೆ ಕಳೆದು, ನಾಳೆಗಳನ್ನು ಸ್ವಾಗತಿಸುತ್ತ ಇಂದಿನ ಜೀವನ ಸುಂದರಗೊಳಿಸುತ್ತ ಬದುಕಬೇಕೆಂದು ಮುಧೋಳ ತಾಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಡಾ.ಸಿದ್ದು ದಿವಾನ ಹೇಳಿದರು.ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಂಗಳೂರು, ಜಿಲ್ಲಾ ಘಟಕ ಹಾಗೂ ರಬಕವಿ-ಬನಹಟ್ಟಿ ತಾಲೂಕು ಘಟಕ ಭಾನುವಾರ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ನಿವೃತ್ತ ನೌಕರರ ಸಂಘದ ಪ್ರಥಮ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಶಬ್ಧದಿಂದ ಮೌನದೆಡೆಗೆ ಹೋಗುವ ದಾರಿಯೊಳೆಗೆ ನಾವಿದ್ದೇವೆ. ಆದರೂ ಪರಿಪೂರ್ಣತೆ ಜೀವನದಲ್ಲಿ ಮರೀಚಿಕೆಯಾಗಿದೆ. ನಮ್ಮ ಜೀವನಾನುಭವಗಳನ್ನು ಸಮಾಜಕ್ಕೆ ನೀಡುವುದು ನಮ್ಮೆಲ್ಲರ ಕರ್ತವ್ಯ. ಇಳಿ ವಯಸ್ಸಿನಲ್ಲಿ ಸಂಘ ಕಟ್ಟಿಕೊಂಡು ಮುನ್ನಡೆಸುವುದು ಸಂತಸ ತಂದಿದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಸಿದ್ದು ಸವದಿ, ಹಿರಿಯರ ಅನುಭವಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ. ತಮ್ಮ ಬದುಕಿನ ಪರಿಪೂರ್ಣ ಅನುಭವಗಳನ್ನು ಈ ಸಮ್ಮೆಳನಗಳಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡು ಸಂತಸ ಪಡುವ ಘಳಿಗೆ ಖುಷಿ ನೀಡಿದೆ ಎಂದರು.ರಬಕವಿ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜಗತ್ತು ಅಧುನಿಕತೆಯತ್ತ ವಾಲುತ್ತಿದೆ. ಗೌರವಾದರಗಳು ಹಿರಿಯರಿಗೆ ದೊರೆಯುತ್ತಿಲ್ಲ. ಇಂದಿನ ಯುವಪೀಳಿಗೆಗೆ ನಿಮ್ಮಂತ ಹಿರಿಜೀವಿಗಳ ಸಲಹೆಗಳ ಅವಶ್ಯಕತೆ ಇದೆ. ತಾವೆಲ್ಲರೂ ಹಿರಿಯರು ತಮ್ಮ ಆರೋಗ್ಯದತ್ತ ಹೆಚ್ಚು ಗಮನಕೊಟ್ಟು ಬದುಕಿನುದ್ದಕ್ಕೂ ಸಂತಸ ಮತ್ತು ಸಂಭ್ರಮದಿಂದ ಬದುಕಿ. ನಿವೃತ್ತಿಯಾದರೂ ನಿಮ್ಮ ಪ್ರವೃತ್ತಿಯಾದ ಉತ್ಸಾಹದ ಚಿಲುಮೆ ಬತ್ತಿಲ್ಲ. ಇದು ಹೀಗೆಯೇ ನೂರು ಕಾಲ ಇರಲಿ ಎಂದರು.ರಬಕವಿ-ಬನಹಟ್ಟಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮೃತ್ಯುಂಜಯ ರಾಮದುರ್ಗ, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಕುಲಕರ್ಣಿ, ನಗರಸಭೆ ಅಧ್ಯಕ್ಷೆ ವಿದ್ಯಾ ಧಬಾಡಿ, ಜಮಖಂಡಿ ತಾಲೂಕು ನಿವೃತ್ತ ನೌಕರ ಸಂಘದ ಅಧ್ಯಕ್ಷ ಎಚ್.ಎಂ. ಶೆಟ್ಟರ, ರಬಕವಿ-ಬನಹಟ್ಟಿ ನಿವೃತ್ತ ನೌಕರ ಸಂಘದ ಗೌರವ ಅಧ್ಯಕ್ಷ ಎಂ.ಎಸ್. ಬದಾಮಿ, ಬಾಲಚಂದ್ರ ಉಮದಿ, ತಾಲೂಕು ಕಸಾಪ ಘಟಕದ ಅಧ್ಯಕ್ಷ ಮ.ಕೃ. ಮೇಗಾಡಿ, ಡಾ.ರವಿ ಜಮಖಂಡಿ, ಡಾ.ಅನಂತಮತಿ ಎಂಡೊಳ್ಳಿ, ಅಭಿಯಂತರ ಸುರೇಶ ಪಟ್ಟಣಶೆಟ್ಟಿ, ಮಹಾದೇವ ಕವಿಶೆಟ್ಟಿ, ಎಸ್.ಕೆ. ಹುನ್ನೂರ, ಬಿ.ಎಂ. ಮಟ್ಟಿಕಲಿ, ಗಣಪತಿ ಪವಾರ, ರಾಜಶೇಖರ ಗುಣಕಿ, ಬಿ.ಎಂ. ಪಾಟೀಲ, ಎಸ್.ಎಂ. ದಾಶಾಳ ಸೇರಿದಂತೆ ಅನೇಕರಿದ್ದರು.
ಇದೇ ವೇಳೆ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ನೀಡುವ ಎಮಿನೆಂಟ್ ಎಂಜಿನಿಯರ್ ಅವಾರ್ಡ್ ಪುರಸ್ಕೃತರಾದ ಅಭಿಯಂತರ ಸುರೇಶ ಪಟ್ಟಣಶೆಟ್ಟಿ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.