ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ ಬಾಧಿಸದಂತೆ ಎಚ್ಚರಿಕೆ ವಹಿಸಬೇಕಾಗಿರುವ ಹಿನ್ನೆಲೆಯಲ್ಲಿ ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಮಂಗಳವಾರ ಡೆಂಘೀ ನಿಮೂ೯ಲನೆ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮೇಯರ್, ಡೆಂಘೀ ತಡೆಗಟ್ಟಲು ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬೇಕು. ಪಾಲಿಕೆಯ ಎಂ.ಪಿ.ಡಬ್ಲ್ಯೂ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಮನೆಯ ಸುತ್ತ ಮುತ್ತ ತ್ಯಾಜ್ಯ ಮತ್ತು ಯಾವುದೇ ವಸ್ತುಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಇದನ್ನು ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಸಾರ್ವಜನಿಕರು ತಮ್ಮ ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಛವಾಗಿ ಇರಿಸಲು ಆಸಕ್ತಿ ವಹಿಸಬೇಕು. ಇದರಿಂದ ಸೊಳ್ಳೆ ಉತ್ಪತ್ತಿಯನ್ನು ತಡೆಯಬಹುದಾಗಿದೆ ಎಂದರು.
ಪಾಲಿಕೆಯಲ್ಲಿ ಹಾಲಿ 22 ಜನ ಸ್ಪ್ರೇಯರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನು ಹೆಚ್ಚುವರಿಯಾಗಿ 38 ಮಂದಿಯನ್ನು ಹೊರಗುತ್ತಿಗೆಯಲ್ಲಿ ಪಡೆದು ವಾರ್ಡ್‌ಗೆ ಪ್ರತಿ 60 ವಾರ್ಡ್‌ಗೆ ಒಬ್ಬರು ಸ್ಪ್ರೇಯರ್ ಕರ್ತವ್ಯ ನಿರ್ವಹಿಸಲು ಕ್ರಮ ವಹಿಸುವಂತೆ ನಿರ್ಣಯಿಸಲಾಯಿತು.
ಆಸ್ಪತ್ರೆಗಳಿಗೆ ಸೂಚನೆ: ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವೊಂದು ಖಾಸಗಿ ಆಸ್ಪತ್ರೆಗಳಾದ ಕೆ.ಎಂ.ಸಿ, ಎ.ಜೆ., ಶ್ರೀನಿವಾಸ್, ಫಾದರ್ ಮುಲ್ಲರ್, ಯೇನೆಪೋಯ, ಕೆ.ಎಸ್. ಹೆಗ್ಡೆ ಯವರು ಪಾಲಿಕೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾದ ಮಲೇರಿಯಾ, ಡೆಂಘೀ ರಕ್ತ ಪರೀಕ್ಷಾ ಸಾಮಾಗ್ರಿ, ನೀಮ್ ಎಣ್ಣೆ, ಮುಂತಾದ ಸಾಮಾಗ್ರಿಗಳನ್ನು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಈ ಎಲ್ಲ ಸಾಮಾಗ್ರಿಗಳನ್ನು ಪಾಲಿಕೆಗೆ ಪೊರೈಸುವಂತೆ ಎಲ್ಲ ಆಸ್ಪತ್ರೆಗಳಿಗೆ ಕೋರಲಾಗಿದೆ. ಪಾಲಿಕೆಯಿಂದ ನೋಡಲ್ ಅಧಿಕಾರಿಯಾಗಿ ಡಾ. ಮಂಜಯ್ಯ ಶೆಟ್ಟಿಯವರನ್ನು ನಿಯೋಜಿಸಲಾಯಿತು. ಮುಖ್ಯವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಖಾಸಗಿಯವರ ಮಾಲಿಕತ್ವದಡಿಯಲ್ಲಿ ಖಾಲಿ ಜಾಗಗಳು ಪಾಳು ಬಿದ್ದಿದ್ದು, ಆ ಜಾಗಗಳಲ್ಲಿ ಸರಿಯಾದ ನಿರ್ವಹಣೆವಿಲ್ಲದೆ ಹುಲ್ಲುಗಳು ಬೆಳೆದಿದ್ದು ಕಟಾವು ಮಾಡದೆ ಆ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿತ್ತಿದೆ. ಆ ಜಾಗದ ಮಾಲೀಕರು ಈ ಕುರಿತು ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಪಾಲಿಕೆ ವ್ಯಾಪ್ತಿಯಿಂದ ಆ ಸ್ಥಳಗಳ ಮಾಲೀಕರಿಗೆ ದಂಡ ವಿಧಿಸಲು ನಿರ್ಧರಿಸಲಾಯಿತು. ಈ ಕುರಿತು ಸಂಬಂಧಪಟ್ಟ ಮಾಲೀಕರು ಎಚ್ಚೆತ್ತುಕೊಂಡು ತಮ್ಮ ತಮ್ಮ ಜಾಗಗಳನ್ನು ಸ್ವಚ್ಛವಾಗಿಡಲು ಕ್ರಮವಹಿಸುವಂತೆ ಈ ಮೂಲಕ ಕೋರಲಾಗಿದೆ ಎಂದರು.
ಉಪಮೇಯರ್ ಸುನೀತಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭರತ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ನವೀನ್ ಕುಲಾಲ್, ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪಾಲಿಕೆಯ ಸದಸ್ಯರಾದ ನವೀನ್ ಡಿ ಸೋಜಾ, ಶಶಿಧರ್ ಹೆಗ್ಡೆ ಮತ್ತಿತರಿದ್ದರು.