ಪಾರ್ಕಿಂಗ್‌ ಜಾಗ ಗುರುತಿಸಲು ಅಧಿಕಾರಿಗಳಿಗೆ ಮೇಯರ್‌ ಸೂಚನೆ

KannadaprabhaNewsNetwork |  
Published : Aug 29, 2024, 12:51 AM IST
ಪಾರ್ಕಿಂಗ್‌ ಸಮಸ್ಯೆ ಕುರಿತು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಶೇಷ ಸಭೆ ನಡೆಯಿತು. | Kannada Prabha

ಸಾರಾಂಶ

ಖಾಸಗಿ ಬಸ್ಸು ನಿಲ್ದಾಣದಿಂದ ಪುರಭವನದವರೆಗೆ ‘ಎಲ್‌’ ಆಕಾರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು. ಲೇಡಿಹಿಲ್‌ ಆಸ್ಪತ್ರೆ ಬಳಿ ಇನ್ಮುಂದೆ ಬಸ್‌ ನಿಲ್ದಾಣ ಇರುವುದಿಲ್ಲ ಎಂದೂ ಅವರು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಅಭಿವೃದ್ಧಿಪಡಿಸಲಾದ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ ಮಾಡಲು ಸಾಧ್ಯತೆ ಇರುವ ಜಾಗಗಳನ್ನು ಗುರುತಿಸಿ ಅದರ ವರದಿಯನ್ನು ಪೊಲೀಸ್‌ ಮತ್ತು ಕಂದಾಯ ಇಲಾಖೆಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮೇಯರ್‌ ಸೂಚನೆ ನೀಡಿದ್ದಾರೆ.

ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆ ಕುರಿತು ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವರದಿ ಸಲ್ಲಿಸಿದ ಬಳಿಕ ಎಲ್ಲರೂ ಚರ್ಚಿಸಿ, ಪರಿಶೀಲನೆ ಮಾಡಿ ಟೆಂಡರ್‌ ಕರೆಯುವಂತೆ ತಿಳಿಸಿದರು.

ಪಾಲಿಕೆ ವತಿಯಿಂದ ನಗರದಲ್ಲಿ ಸೂಕ್ತ ಪಾರ್ಕಿಂಗ್‌ ಸ್ಥಳಗಳನ್ನು ನಿಗದಿಪಡಿಸಬೇಕು. ಅಲ್ಲಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡ ಹಾಕುವುದು, ವಾಹನಗಳನ್ನು ವಶಪಡಿಸುವ ಕಾರ್ಯ ನಡೆಸಿದಾಗ ಸಾರ್ವಜನಿಕರಿಂದ ಪಾರ್ಕಿಂಗ್‌ಗೆ ಜಾಗ ಕೊಡಿ ಎಂಬ ಪ್ರಶ್ನೆ ಬರುತ್ತಿದೆ ಎಂದು ಡಿಸಿಪಿ ದಿನೇಶ್‌ ಕುಮಾರ್‌ ಸಭೆಯಲ್ಲಿ ತಿಳಿಸಿದಾಗ, ಸ್ಮಾರ್ಟ್‌ ಸಿಟಿ ಮೂಲಕ ಅಭಿವೃದ್ಧಿಯಾಗಿರುವ ರಸ್ತೆಗಳ ಪಟ್ಟಿ ಮಾಡಿ, ಪಾರ್ಕಿಂಗ್‌ಗೆ ಸೂಕ್ತ ಜಾಗದ ವರದಿ ನೀಡಲು ಮೇಯರ್‌ ಸೂಚಿಸಿದರು.

ನಗರದಲ್ಲಿ ಮನಸ್ಸಿಗೆ ಬಂದಂತೆ ರಸ್ತೆಗಳನ್ನು ಅಗೆಯಲಾಗುತ್ತಿದೆ. ಬೆಂದೂರ್‌ವೆಲ್‌, ಕರಂಗಲ್ಪಾಡಿಯಲ್ಲಿ ಸಿಗ್ನಲ್‌ ಲೈಟ್‌ ಇರುವಲ್ಲೇ ಬಸ್‌ ನಿಲ್ದಾಣ ಇರುವುದರಿಂದ ಸಮಸ್ಯೆ ಆಗುತ್ತಿದೆ. ಎರಡು ಸಿಗ್ನಲ್‌ ಮಾಡಬೇಕಾದರೆ ಬಸ್‌ ನಿಲ್ದಾಣಗಳನ್ನು ಸ್ಥಳಾಂತರ ಮಾಡಬೇಕು. ವಿವಿಧೆಡೆ ಝೀಬ್ರಾ ಕ್ರಾಸಿಂಗ್‌ ಅಳವಡಿಸುವಂತೆ ಪಾಲಿಕೆಗೆ ಹಲವು ಪತ್ರಗಳನ್ನು ಬರೆಯಲಾಗಿದ್ದರೂ ಪೂರಕ ಸ್ಪಂದನೆ ದೊರಕಿಲ್ಲ ಎಂದು ಡಿಸಿಪಿ ಅಸಮಾಧಾನ ವ್ಯಕ್ತಪಡಿಸಿದರು.

ಆರ್‌ಟಿಒ ರಸ್ತೆ ದ್ವಿಮುಖ ಸಂಚಾರಕ್ಕೆ ಒತ್ತಾಯ:

ಕಾರ್ಪೊರೇಟರ್‌ ಲತೀಫ್‌ ಮಾತನಾಡಿ, ಆರ್‌ಟಿಒ ರಸ್ತೆಯಲ್ಲಿ ಈ ಹಿಂದಿನಂತೆ ದ್ವಿಮುಖ ಸಂಚಾರ ಮಾಡದಿದ್ದರೆ ತೀವ್ರ ಸಮಸ್ಯೆ ಎದುರಾಗಲಿದೆ, ಜನರು ಮತ್ತಷ್ಟು ಕಷ್ಟಪಡುವಂತಾಗುತ್ತದೆ ಎಂದರು. ಇದಕ್ಕೆ ಪ್ರೇಮಾನಂದ ಶೆಟ್ಟಿ ಕೂಡ ಧ್ವನಿಗೂಡಿಸಿದರು. ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್‌ ಕುಮಾರ್‌, ಈ ರಸ್ತೆ ಮೊದಲಿದ್ದಂತೆ ದ್ವಿಮುಖ ಸಂಚಾರಕ್ಕೆ ಮುಕ್ತವಾಗಿರಬೇಕಿತ್ತು. ಆದರೆ ಇದೀಗ ಅಲ್ಲಿ ಫುಟ್ಪಾತ್‌ ಅಗಲಗೊಳಿಸಿ ರಸ್ತೆ ಕಿರಿದು ಮಾಡಲಾಗಿದೆ. ರಸ್ತೆ ಅಗಲಗೊಳಿಸಿದರೆ ಮಾತ್ರ ದ್ವಿಮುಖ ಸಂಚಾರ ಮಾಡಲು ಸಾಧ್ಯ ಎಂದರು.

ಅಧ್ಯಯನ ವರದಿ ಅಗತ್ಯ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 60 ವಾರ್ಡ್‌ಗಳ ಟ್ರಾಫಿಕ್‌ ಸಮಸ್ಯೆ ಗುರುತಿಸುವ ನಿಟ್ಟಿನಲ್ಲಿ ಎನ್‌ಐಟಿಕೆ ಮೂಲಕ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಅಧ್ಯಯನ ನಡೆಸಿ ಅದರ ವರದಿ ಆಧಾರದಲ್ಲಿ ಸಮಗ್ರ ಯೋಜನೆ ರೂಪಿಸುವ ಕೆಲಸ ಆಗಬೇಕು ಎಂದು ಹಿರಿಯ ಸದಸ್ಯ ಶಶಿಧರ ಹೆಗ್ಡೆ ಸಲಹೆ ನೀಡಿದರು.ವಾಹನ ದಟ್ಟಣೆ ಸಮಸ್ಯೆ ಬಗ್ಗೆ ಮಹತ್ವದ ನಿರ್ಣಯವಾಗದೆ ಸಭೆ ಮುಕ್ತಾಯವಾಯಿತು. ಅನೇಕ ಕಾರ್ಪೊರೇಟರ್‌ಗಳು ಸಭೆಗೆ ಗೈರುಹಾಜರಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!