ಸಂದೀಪ್ ವಾಗ್ಲೆ
ಪದವಿ ಪರೀಕ್ಷೆಗಳು ಮುಗಿದ ಬಳಿಕ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪರೀಕ್ಷೆ ನಡೆಸೋದು ವಾಡಿಕೆ. ಆದರೆ ಈ ಬಾರಿ ರಾಜ್ಯಾದ್ಯಂತ ಎಲ್ಲ ವಿವಿಗಳಲ್ಲಿ ಪದವಿ ಪರೀಕ್ಷೆ ನಡೆಯುತ್ತಿರುವಾಗ ಅದರ ನಡುವಿನಲ್ಲೇ ಎಂಬಿಎ, ಎಂಸಿಎ (ಪಿಜಿ) ಪ್ರವೇಶ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾಗಿದ್ದು, ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜೂ.22ರಂದು ನಿಗದಿಪಡಿಸಲಾಗಿರುವ ಪ್ರವೇಶ ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳು ಸಹಿ ಸಂಗ್ರಹ ಅಭಿಯಾನ ನಡೆಸಿದರೂ ಕೆಇಎ ಮಾತ್ರ ಪಟ್ಟು ಸಡಿಲಿಸುತ್ತಿಲ್ಲ!
ರಾಜ್ಯದಲ್ಲಿ ವರ್ಷಂಪ್ರತಿ ಸುಮಾರು 50 ಸಾವಿರದಷ್ಟು ವಿದ್ಯಾರ್ಥಿಗಳು ಎಂಬಿಎ ಪ್ರವೇಶ ಪಡೆದರೆ, ಸುಮಾರು 40 ಸಾವಿರದಷ್ಟು ಎಂಸಿಎ ಕೋರ್ಸ್ ಸೇರುತ್ತಾರೆ. ಈ ಬಾರಿ ಇಷ್ಟೊಂದು ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಯಲ್ಲಿ ಅಂಕಗಳ ಆಧಾರದಲ್ಲಿ ರ್‍ಯಾಂಕ್ ನೀಡಲಾಗುತ್ತದೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಂತೆ ಇದರಲ್ಲೂ ಉತ್ತಮ ರ್‍ಯಾಂಕ್ ಪಡೆಯುವ ವಿದ್ಯಾರ್ಥಿಗಳು ರಾಜ್ಯದ ಉತ್ತಮ ಕಾಲೇಜು ಸೇರಲು ಅರ್ಹತೆ ಪಡೆಯುತ್ತಾರೆ. ಪದವಿ ಪರೀಕ್ಷೆಯ ನಡುವೆಯೇ ಪ್ರವೇಶ ಪರೀಕ್ಷೆ ನಡೆಸಿದರೆ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಬೇಕೋ, ಪದವಿ ಪರೀಕ್ಷೆಗೆ ಮೊದಲ ಆದ್ಯತೆ ನೀಡಬೇಕೋ ಎಂಬ ಗೊಂದಲ ವಿದ್ಯಾರ್ಥಿಗಳದ್ದು.
ಭಿನ್ನ ಪಠ್ಯಕ್ರಮ:
ಸಹಸ್ರಾರು ಸಹಿ ಅಭಿಯಾನಕ್ಕೂ ಕಿಮ್ಮತ್ತಿಲ್ಲ:
ಪ್ರವೇಶ ಪರೀಕ್ಷೆ ಮುಂದೂಡುವ ಕುರಿತು ಮಂಗಳೂರಿನ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಎರಡೇ ದಿನದಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅದಕ್ಕೆ ಸಹಿ ಹಾಕಿದ್ದಾರೆ. ಆದರೂ ಪ್ರವೇಶ ಪರೀಕ್ಷೆ ದಿನಾಂಕ ಮುಂದೂಡಲು ಪ್ರಾಧಿಕಾರ ಸುತರಾಂ ಒಪ್ಪುತ್ತಿಲ್ಲ.-----------
ಎಂಬಿಎ, ಎಂಸಿಎ ಪ್ರವೇಶ ಪರೀಕ್ಷೆಗೆ ರಾಜ್ಯದಲ್ಲಿ ಕೆಲವೇ ಪರೀಕ್ಷಾ ಕೇಂದ್ರಗಳಿವೆ. ಪ್ರಸ್ತುತ ದೂರದೂರುಗಳಿಗೆ ಹೋಗಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದೆ. ಪದವಿ ಪರೀಕ್ಷೆ ಬಳಿಕ ಪ್ರವೇಶ ಪರೀಕ್ಷೆ ನಡೆಯುತ್ತದೆ ಎಂದೇ ನಂಬಿಕೊಂಡಿದ್ದ ಈ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ತಮ್ಮೂರಿಗೆ ಹತ್ತಿರದ ಪರೀಕ್ಷಾ ಕೇಂದ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಪದವಿ ಪರೀಕ್ಷೆ ಬರೆಯುವ ನಡುವೆ ತಮ್ಮೂರಿಗೆ ತೆರಳಿ ಪ್ರವೇಶ ಪರೀಕ್ಷೆ (ಜೂ.22 ಭಾನುವಾರ) ಬರೆದು ಮತ್ತೆ ಮರುದಿನ ತಮ್ಮ ಕಾಲೇಜು ಇರುವ ದೂರದೂರಿಗೆ ತೆರಳಿ ಪದವಿ ಪರೀಕ್ಷೆ ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಪ್ರಯಾಣದಲ್ಲೇ ದಿನಪೂರ್ತಿ ಮುಗಿದೇ ಹೋಗುತ್ತದೆ, ಇನ್ನು ಪರೀಕ್ಷೆಗೆ ಓದುವುದು ಯಾವಾಗ ಎಂದು ಬೆಂಗಳೂರಿನಲ್ಲಿ ಕಲಿಯುತ್ತಿರುವ ಮಂಗಳೂರಿನ ವಿದ್ಯಾರ್ಥಿ ಕಣ್ಣೀರು ಹಾಕುತ್ತಾರೆ.
------------ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆ ಜೂ.22ರಂದು ಭಾನುವಾರ ನಿಗದಿಯಾಗಿದೆ. ಪರೀಕ್ಷೆಯ ಹಾಲ್ ಟಿಕೆಟ್ ಮತ್ತಿತರ ಪೂರಕ ದಾಖಲೆಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ. ಪರೀಕ್ಷೆ ಮುಂದೂಡಿಕೆಯ ಕುರಿತು ಈಗಿನ ಪ್ರಕಾರ ನಿರ್ಧಾರ ಆಗಿಲ್ಲ. ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರಿಗೆ ಯಾವುದೇ ಗೊಂದಲ ಇದ್ದರೂ ನೇರವಾಗಿ ಕಚೇರಿಗೆ ಬಂದು ಅನುಮಾನ ಪರಿಹರಿಸಿಕೊಳ್ಳಬಹುದು.- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿ.