ಒಂದು ಸಂಸಾರ ನಡೆಸುವುದು ಕಷ್ಟ ಎಷ್ಟಿದೆ ಎಂದು ನಿಮಗೆ ತಿಳಿದಿದೆ. ಅಂತಹದರಲ್ಲಿ ಒಂದು ಶ್ರೀ ಮಠ ನಡೆಸುವುದು ಅಷ್ಟು ಸುಲಭದ ಮಾತಲ್ಲ ಎಂದು ಚಿಕ್ಕತೊಟ್ಟುಕೆರೆ ಅಟವಿ ಸ್ವಾಮಿ ಮಠದ ಅಟ್ಟವಿ ಶಿವಲಿಂಗ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಒಂದು ಸಂಸಾರ ನಡೆಸುವುದು ಕಷ್ಟ ಎಷ್ಟಿದೆ ಎಂದು ನಿಮಗೆ ತಿಳಿದಿದೆ. ಅಂತಹದರಲ್ಲಿ ಒಂದು ಶ್ರೀ ಮಠ ನಡೆಸುವುದು ಅಷ್ಟು ಸುಲಭದ ಮಾತಲ್ಲ ಎಂದು ಚಿಕ್ಕತೊಟ್ಟುಕೆರೆ ಅಟವಿ ಸ್ವಾಮಿ ಮಠದ ಅಟ್ಟವಿ ಶಿವಲಿಂಗ ಸ್ವಾಮೀಜಿ ತಿಳಿಸಿದರು.ಪಟ್ಟಣದ ಶ್ರೀ ತೊರೆಮಠದಲ್ಲಿ ಚಂದ್ರಶೇಖರ ದೇಶಿಕೇಂದ್ರ ಸ್ವಾಮಿಗಳ ನಿರಂಜನ ನಿರಭಾರ ಚರಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಶೇಖರ ಶ್ರೀಗಳು ಲಿಂಗೈಕ್ಯರಾದ ಬಳಿಕ ತೊರೆಮಠದ ಚಟುವಟಿಕೆಗಳು ಕುಂಠಿತವಾಗಿದ್ದವು. ಶ್ರೀ ಚನ್ನಬಸವೇಶ್ವರರ ಪುಣ್ಯ ಭೂಮಿಯಾಗಿದ್ದು, ಇಲ್ಲಿನ ಮಠವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಇಲ್ಲಿನ 18 ಕೋಮಿನ ಜನರು ಶ್ರೀಗಳಿಗೆ ಸಹಕಾರ ನೀಡಬೇಕು. ಜಿಲ್ಲೆಯಲ್ಲಿನ ಧಾರ್ಮಿಕ ಪರಂಪರೆಯುಳ್ಳ ಕೆಲ ಮಠಗಳ ಪೈಕಿ ಆಟವಿ ಶ್ರೀಗಳಿಂದ ಸ್ಥಾಪಿತ ತೊರೆಮಠ ಕೂಡ ಗುರು ಪರಂಪರೆ ಉಳಿಸಿಕೊಂಡು ಬೆಳೆದಿದೆ. ಐತಿಹಾಸಿಕ ಅಟವೀ ಮಹಾಸ್ವಾಮಿಗಳಿಂದ ಸ್ಥಾಪಿತ ಗುಬ್ಬಿ ತೊರೆಮಠಕ್ಕೆ ನೂತನ ಶ್ರೀ ಅಟವಿ ಚನ್ನಬಸವ ಸ್ವಾಮೀಜಿಗಳನ್ನು ಉತ್ತರಾಧಿಕಾರಿಯಾಗಿ ಮಾಡಲಾಗಿದೆ ಎಂದರು. ನೂತನವಾಗಿ ಉತ್ತರಾಧಿಕಾರಿಯಾದ ಶ್ರೀ ಅಟವೀ ಚನ್ನಬಸವ ಸ್ವಾಮೀಜಿ ಮಾತನಾಡಿ, ನಾಡಿನ ಹಲವು ಶ್ರೀಗಳ ಮಾರ್ಗದರ್ಶನದಲ್ಲಿ ನಾನು ಇದುವರೆಗೂ ಕಲಿಕೆ, ಕಾಯಕ ಮಾಡಿದ್ದು ಇಂದು ಇಲ್ಲಿ ಪಟ್ಟಾಧಿಕಾರ ಪಡೆದಿದ್ದೇನೆ. ಮಠದ ಅಭಿವೃದ್ಧಿಗಾಗಿ ಕಾಯಕ ಮಾಡಲು ಸಿದ್ಧನಾಗಿದ್ದೇನೆ. ಗುಬ್ಬಿಯಲ್ಲಿನ 18 ಕೋಮಿನ ಒಗ್ಗಟ್ಟು ನೋಡಿದಾಗ ನಿಜವಾಗಿಯೂ ಇಂತಹ ಮಠದಲ್ಲಿ ನಾನು ಶ್ರೀಗಳಾಗಿರುತ್ತಿರುವುದಕ್ಕೆ ಸಂತೋಷವಿದೆ. ತಮ್ಮೆಲ್ಲರ ಸಹಕಾರ ಈ ಮಠಕ್ಕೆ ಬೇಕಿದೆ. ಇಲ್ಲಿ ಆಸ್ತಿ, ಅಂತಸ್ತು, ಬಂಗಾರವಿದೆ ಎಂದು ಖಂಡಿತ ಬಂದಿಲ್ಲ. ಇಲ್ಲಿನ ಭಕ್ತರೇ ದೊಡ್ಡ ಆಸ್ತಿ ಎಂದು ನಂಬಿ ಬಂದಿದ್ದು, ಖಂಡಿತವಾಗಿ ಶ್ರೀಮಠವನ್ನ ಉತ್ತಮ ಸ್ಥಾನಮಾನಗಳಿಗೆ ಕರೆದುಕೊಂಡು ಹೋಗಲು ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.
ಎರಡು ದಿನಗಳ ಕಾಲ ಹಲವು ಧಾರ್ಮಿಕ ಕಾರ್ಯಕ್ರಮಗಳು, ಶ್ರೀಗಳ ಪಲ್ಲಕ್ಕಿ ಉತ್ಸವ, ಶ್ರೀಗಳನ್ನು ಬೆಳ್ಳಿರಥದಲ್ಲಿ ಕೂರಿಸಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗುಬ್ಬಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಬೆಳ್ಳಾವಿಯ ಶ್ರೀ ಕಾರದ ವೀರಬಸವ ಸ್ವಾಮಿಜಿ, ತವಡೆ ಹಳ್ಳಿಯ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿದು ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ, ಅಂಕಲಗಿರಿ ಮತ್ತು ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ, ಸೇರಿದಂತೆ ಹಲವು ಶ್ರೀಗಳು ಹಾಗೂ ಹಲವು ರಾಜಕೀಯ ಮುಖಂಡರು, ಗುಬ್ಬಿಯ 18 ಕೋಮಿನ ಮುಖಂಡರು, ಭಕ್ತಾದಿಗಳು ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.