ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ತಡೆಗಟ್ಟಲು ಸಂಬಂಧಿಸಿದ ಇಲಾಖೆಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯ ಪ್ರವೃತ್ತರಾಗಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ ಜರುಗಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಪ್ರಕರಣಗಳು ಕಂಡುಬಂದಲ್ಲಿ ಇದಕ್ಕೆ ಕಾರಣಗಳನ್ನು ಹುಡುಕಿ ಅನೈತಿಕ ಸಾಗಾಣಿಕೆಗೆ ಕಡಿವಾಣ ಹಾಕಲು ಅಧಿಕಾರಿಗಳು, ಸಿಬ್ಬಂದಿ ಮುಂದಾಗಬೇಕು. ಈ ಕಾರ್ಯದಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದರು. ಸ್ವಾಧಾರ ಗೃಹಗಳಲ್ಲಿ ದಾಖಾಲಾಗಿರುವ ನಿವಾಸಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಪುನರ್ವಸತಿ ನೀಡುವ ಕಾರ್ಯವಾಗಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಲು ಸೂಚಿಸಿದರು.ಚಿಕ್ಕೋಡಿಯಲ್ಲಿ ಪ್ರಾರಂಭಾವಗಿರುವ ಸಖಿ ಒನ್ ಘಟಕದಲ್ಲಿ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದ್ದು, ಸಖಿ ಒನ್ ಘಟಕ ಪ್ರಾರಂಭವಾಗಿರುವ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವುದರ ಮೂಲಕ ಜಾಗೃತಿ ಮೂಡಿಸಲು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಪಿಎಂಜೆಜೆಬಿವೈ ಹಾಗೂ ಪಿಎಂಎಸ್‌ಪಿವೈ ಯೋಜನೆಗಳ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕ್ರಮ ವಹಿಸಲು ತಿಳಿಸಿದರು. ಜಿಲ್ಲೆಯಲ್ಲಿ ಬಾಲ ಆಧಾರ್ ನೋಂದಣಿ ಕಾರ್ಯ ಕುಂಠಿತವಾಗಿದ್ದು, ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳ ಬಾಲ ಆಧಾರ್ ಮಾಡಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿ ಅಭಿಯಾನದ ರೂಪದಲ್ಲಿ ಬಾಲ ಆಧಾರ್ ನೋಂದಣಿ ಕಾರ್ಯಕ್ಕೆ ಕ್ರಮಕೈಗೊಳ್ಳುವಂತೆ ಶಿಂಧೆ ತಿಳಿಸಿದರು.