ಕೊಡಗು ಬಹು ಭಾಷಿಕರ ನೆಲೆವೀಡು: ಸುಬ್ರಾಯ ಸಂಪಾಜೆ

KannadaprabhaNewsNetwork |  
Published : Jun 14, 2025, 12:17 AM IST
ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ  ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು | Kannada Prabha

ಸಾರಾಂಶ

ಕೃಷಿಕ ಜೀವನ ಮತ್ತು ಔದ್ಯಮಿಕ ಕ್ಷೇತ್ರದ ಸಾಧನೆಯಷ್ಟೇ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆ ಕೂಡ ಬಾಳಿನ ನೆಮ್ಮದಿಗೆ ಅವಶ್ಯ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೃಷಿಕ ಜೀವನ ಮತ್ತು ಔದ್ಯಮಿಕ ಕ್ಷೇತ್ರದ ಸಾಧನೆಯಷ್ಟೇ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆ ಕೂಡ ಬಾಳಿನ ನೆಮ್ಮದಿಗೆ ಅವಶ್ಯ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅಭಿಪ್ರಾಯಪಟ್ಟಿದ್ದಾರೆ.

ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಬಳಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡಗು ವಿಭಿನ್ನ ಸಂಸ್ಕೃತಿ ಸಂಪ್ರದಾಯ ಉಳ್ಳ ಬಹು ಭಾಷಿಕರ ನೆಲೆವೀಡು. ದೇಶಕ್ಕೆ ಕೀರ್ತಿ ತಂದುಕೊಟ್ಟ ಸೈನಿಕರ ಕ್ರೀಡಾಳುಗಳ ತವರು. ಈ ಎಲ್ಲ ಕ್ಷೇತ್ರಗಳ ಸಾಧನೆಯೊಂದಿಗೆ ಅರೆಭಾಷಿಕ ಜನಾಂಗ ಇತ್ತೀಚಿನ ದಿನಗಳಲ್ಲಿ ಸಂಗೀತ, ನೃತ್ಯ, ನಾಟಕ, ಭರತನಾಟ್ಯ ಹೀಗೆ ಲಲಿತಕಲೆಗಳು ಮತ್ತು ಸಾಹಿತ್ಯದ ವಿವಿಧ ಸಾಧನಾ ಪಥಗಳಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು ಜನಾಂಗದ ಸರ್ವಾಂಗೀಣ ಪ್ರಗತಿಯ ಪ್ರತೀಕ ಎಂದು ಸಂಪಾಜೆ ನುಡಿದರು. ಬಾನುಲಿಯಲ್ಲಿ ಬಿತ್ತರಗೊಳ್ಳುವ ಭಕ್ತಿಗೀತೆಗಳು, ಸುಪ್ರಭಾತ, ವೈವಿಧ್ಯಮಯ ಕಾರ್ಯಕ್ರಮಗಳು ಹಿರಿಯರ ಮುಂದಾಲೋಚನೆಯಿಂದ ಸಾಧ್ಯವಾಯ್ತು. ಅಕಾಡೆಮಿಯ ಪಾತ್ರ ಗುರುತರವಾದುದು. ಮಹಿಳಾ ಸಂಘಟನೆಗಳ ಕ್ರಿಯಾಶೀಲತೆಯಂತೂ ಗಮನಾರ್ಹ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಕೂಡಕಂಡಿ ಎಂ.ನಂಜುಂಡ ಅವರು, "ಯಾವುದೇ ಸಮುದಾಯದ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾದುದು. ಈ ಗುಟ್ಟನ್ನರಿತು ಅರೆಭಾಷಿಕ ಜನಾಂಗ ತಮ್ಮ ಸರ್ವಾಂಗೀಣ ಏಳಿಗೆಯತ್ತ ಇನ್ನಷ್ಟು ಗಮನಹರಿಸಬೇಕು. ರೇಡಿಯೋ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಈ ಕೆಲಸ ಇನ್ನಷ್ಟು ಚುರುಕಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ (ಗಪ್ಪು) ಅವರು ಮೊದಲ ದಿನಗಳಲ್ಲಿ ಸೋಬಾನೆಗೆ ಸೀಮಿತವಾಗಿದ್ದ ರೇಡಿಯೋ ಕಾರ್ಯಕ್ರಮಗಳು ಜನಾಂಗದ ಜನತೆ ಜಾಗೃತರಾದ ಕಾರಣ ವೈವಿಧ್ಯತೆಯನ್ನು ಪಡೆದುಕೊಂಡಿತು. ನಾಟಕ ರೂಪಕಗಳು ಅರೆಭಾಷೆಯಲ್ಲಿ ಪ್ರಸಾರವಾಗಿ ಜನಾಂಗದ ಜನತೆ ಹೆಮ್ಮೆ ಪಡುವಂತಾಯಿತು ಎಂದರು.

ಇದಕ್ಕೂ ಮೊದಲು ಪೂರ್ಣಕುಂಭ ಸ್ವಾಗತ ನೀಡಿ ಸಾಂಪ್ರದಾಯಿಕವಾಗಿ ಸುಬ್ರಾಯ ಸಂಪಾಜೆ ದಂಪತಿಯನ್ನು ಬರಮಾಡಿಕೊಂಡು ಸಮುದಾಯದ ವತಿಯಿಂದ ಬಾನುಲಿ ಸೇವೆಗಾಗಿ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಸದಸ್ಯರಿಂದ ಶೋಭಾನೆ ಪದ, ಕವನವಾಚನ, ಗೀತ ಗಾಯನ ಕಾರ್ಯಕ್ರಮಗಳು ನಡೆಯಿತು.

ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಚೇರಂಬಾಣೆ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಇದ್ದರು.

ಬೈಮನ ಜ್ಯೋತಿ ತಿಮ್ಮಯ್ಯ ಹಾಡಿನೊಂದಿಗೆ ಪ್ರಾರ್ಥಿಸಿದ ಕಾರ್ಯಕ್ರಮವನ್ನು ಬೆಳ್ಯನ ಚಂದ್ರಪ್ರಕಾಶ್ ಸ್ವಾಗತಿಸಿದರು. ಕೇಕಡ ಪೂಜಾ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿ ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ