ಮಂಗಳೂರು: 114 ವರ್ಷ ಇತಿಹಾಸ ಹೊಂದಿರುವ ಮಂಗಳೂರಿನ ಎಂಸಿಸಿ ಬ್ಯಾಂಕ್‌ನ 22ನೇ ದೇರಳಕಟ್ಟೆ ಶಾಖೆಯ ಉದ್ಘಾಟನಾ ಕಾರ್ಯಕ್ರಮ 28ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಹಿಸಲಿದ್ದಾರೆ. ಪಾನೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ಧರ್ಮಗುರು ವಂ.ವಿಕ್ಟರ್ ಡಿಮೆಲ್ಲೊ ಆಶೀರ್ವದಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಶಾಖೆ ಉದ್ಘಾಟಿಸುವರು. ಆರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಸಿಸ್ಟರ್ ಮಿಲ್ಲಿ ಫರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಫಾದರ್ ಮುಲ್ಲರ್‌ಹೋಮಿಯೋಪತಿ ಕಾಲೇಜು ಆಡಳಿತಾಧಿಕಾರಿ ವಂ.ನಿಲೇಶ್ ಕ್ರಾಸ್ತಾ, ಕೋಟೆಕಾರ್ ಪ.ಪಂ.ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ, ಬೆಳ್ಮ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಎಂ.ಸತ್ತಾರ್ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದರು.
114 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್, 31 ಮಾರ್ಚ್ 2026ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಬ್ಯಾಂಕ್ ಒಟ್ಟು ವ್ಯವಹಾರ ವಹಿವಾಟಿನಲ್ಲಿ ಶೇ.22.89 ಬೆಳವಣಿಗೆಯೊಂದಿಗೆ 1,535 ಕೋಟಿ ರು. ಮೈಲಿಗಲ್ಲು ತಲುಪಿದೆ. ಬ್ಯಾಂಕಿನ ನಿವ್ವಳ ಮೌಲ್ಯ 83.76 ಕೋಟಿ ರು.ಯಿಂದ 91.80 ಕೋಟಿ ರು.ಗೆ ಏರಿಕೆಯಾಗಿದೆ. ಎನ್ಆರ್‌ಐ ಗ್ರಾಹಕರ ಬೆಂಬಲ ಬ್ಯಾಂಕಿನ ಬೆಳವಣಿಗೆಗೆ ಪ್ರಮುಖ ಶಕ್ತಿಯಾಗಿದೆ ಎಂದರು.
2018ರಲ್ಲಿ ನಮ್ಮ ತಂಡ ಆಡಳಿತ ವಹಿಸಿಕೊಂಡ ನಂತರ ಬ್ಯಾಂಕ್ ಗಮನಾರ್ಹ ಬೆಳವಣಿಗೆ ಕಂಡಿದೆ. ಠೇವಣಿಗಳು 304 ಕೋಟಿ ರು.ಯಿಂದ 876 ಕೋಟಿ ರು.ಗೆ ಏರಿಕೆಯಾಗಿ ಶೇ.188 ಬೆಳವಣಿಗೆ ದಾಖಲಿಸಿದೆ. 22 ವರ್ಷಗಳ ನಂತರ ಬ್ಯಾಂಕ್ ಬ್ರಹ್ಮಾವರ, ಬೆಳ್ತಂಗಡಿ, ಬೆಳ್ಮಣ್, ಬೈಂದೂರು ಮತ್ತು ಸಂತೆಕಟ್ಟೆಯಲ್ಲಿ ಹೊಸ ಶಾಖೆಗಳನ್ನು ಆರಂಭಿಸುವ ಮೂಲಕ ವಿಸ್ತರಣೆಗೆ ಚಾಲನೆ ನೀಡಿದೆ ಎಂದರು.ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಆ್ಯಂಡ್ರೂ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಎಲ್ರಾಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್, ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್ ಮತ್ತಿತರರು ಇದ್ದರು.