ಎಂಸಿಸಿ ಬ್ಯಾಂಕ್: 13.00 ಕೋಟಿ ರು. ಲಾಭ, ಶೀಘ್ರದಲ್ಲೇ ಬೈಂದೂರಿನಲ್ಲಿ 20ನೇ ಶಾಖೆ

KannadaprabhaNewsNetwork |  
Published : Apr 16, 2025, 12:38 AM IST
ಅಧ್ಯಕ್ಷ ಅನಿಲ್‌ ಲೋಬೋ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಎಂಸಿಸಿ ಬ್ಯಾಂಕ್‌ ಲಿಮಿಟೆಡ್‌ ಕಳೆದ ವರ್ಷದಲ್ಲಿ ಒಟ್ಟು 13.00 ಕೋಟಿ ರುಪಾಯಿ ವ್ಯವಹಾರಿಕ ಲಾಭ ಗಳಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಶೇ.1.30 ಎನ್.ಪಿ.ಎ. ದಾಖಲಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕದ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಂಸಿಸಿ ಬ್ಯಾಂಕ್‌ ಲಿಮಿಟೆಡ್‌ ಕಳೆದ ವರ್ಷದಲ್ಲಿ ಒಟ್ಟು 13.00 ಕೋಟಿ ರುಪಾಯಿ ವ್ಯವಹಾರಿಕ ಲಾಭ ಗಳಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಶೇ.1.30 ಎನ್.ಪಿ.ಎ. ದಾಖಲಿಸಿದೆ.ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಂಗಳವಾರ ಬ್ಯಾಂಕ್‌ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ. ವಿತ್ತೀಯ ವರ್ಷದಲ್ಲಿ ಬೆಳ್ತಂಗಡಿ ಮತ್ತು ಬೆಳ್ಮಣ್‌ನಲ್ಲಿ ಕ್ರಮವಾಗಿ 18ನೇ ಮತ್ತು 19ನೇ ಶಾಖೆಯನ್ನು ತೆರೆದಿದ್ದು, ಬೈಂದೂರ್‌ನಲ್ಲಿ ಶೀಘ್ರದಲ್ಲೇ ಶಾಖೆಯನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಎರಡನೇ ಬ್ಯಾಂಕ್ ಆಗಿದೆ ಎಂದರು.

ಗುರಿ ಮೀರಿದ ವ್ಯವಹಾರ:

ಬ್ಯಾಂಕಿನ ವ್ಯವಹಾರ 1,240 ಕೋಟಿ ರು. ತಲುಪಿದ್ದು, ಈ ಆರ್ಥಿಕ ವರ್ಷದ ಇನ್ನೊಂದು ಮಹತ್ವದ ಸಾಧನೆಯಾಗಿದೆ.ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಚೇರಿಯೊಂದಿಗೆ ಎಂಸಿಸಿ ಬ್ಯಾಂಕ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದ್ದು, ಕಳೆದ ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ 76.00 ಕೋಟಿ ರು.ನಿಂದ 86.68 ಕೋಟಿ ರು.ಗೆ ತಲುಪಿದೆ. ಬ್ಯಾಂಕಿನ ವ್ಯವಹಾರ 1,240 ಕೋಟಿ ರು. ದಾಟಿದ್ದು ಕಳೆದ ವರ್ಷಕ್ಕಿಂತ ಶೇಕಡಾ 15 ಏರಿಕೆಯಾಗಿದೆ ಎಂದರು.

ಒಟ್ಟು ಠೇವಣಿಯಲ್ಲಿ ಶೇಕಡಾ11ರ ಪ್ರಗತಿ ಸಾಧಿಸಿದ್ದು, 705.40 ಕೋಟಿ ರು. ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡಾ 20.37 ಪ್ರಗತಿ ಸಾಧಿಸಿದ್ದು ರೂ.535.49 ಕೋಟಿ ರು. ಮುಂಗಡ, ದುಡಿಯುವ ಬಂಡವಾಳ 836.73 ಕೋಟಿ ರು. (ಪ್ರಗತಿ ಶೇಕಡಾ 11.13) ಮತ್ತು ಶೇರು ಬಂಡವಾಳ 32.43 ಕೋಟಿ ರು.(ಪ್ರಗತಿ ಶೇಕಡಾ 3.91) ಆಗಿದೆ ಎಂದರು. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಂಕಿಂಗ್ ಮುಖಾಂತರ ನಡೆಸುತ್ತಿದ್ದು, ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲೂ ದೊರೆಯುತ್ತವೆ. ಗ್ರಾಹಕರಿಗೆ ಕಡಿಮೆ ಬಾಡಿಗೆಯಲ್ಲಿ ಲಾಕರ್ ಸೌಲಭ್ಯ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗೃಹ ಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಅಂಡ್‌ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ ವಿಮಾ ಸೌಲಭ್ಯವಿದೆ ಎಂದರು.

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರ್ಯೂ ಡಿಸೊಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜಾ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೊಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೊಜಾ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಇದ್ದರು. ಮುಂದಿನ ಕಾರ್ಯಯೋಜನೆಜುಲೈ ಅಂತ್ಯದೊಳಗೆ ಬೈಂದೂರಿನಲ್ಲಿ 20ನೇ ಶಾಖೆ, ಜೂನ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಕುಲಶೇಖರ ಶಾಖೆಯ ಸ್ಥಳಾಂತರ, ಗೂಗಲ್ ಪೇ, ಫೊನ್ ಪೇ, ಯುಪಿಎ ಸೌಲಭ್ಯಗಳು, ಮಾರ್ಚ್ ಅಂತ್ಯದೊಳಗೆ 1,500 ಕೋಟಿ ರು. ವ್ಯವಹಾರದ ಗುರಿ ಹೊಂದಲಾಗಿದೆ ಎಂದು ಅನಿಲ್‌ ಲೋಬೋ ಹೇಳಿದರು. ಬ್ಯಾಂಕಿನ ಸದಸ್ಯರು, ಬ್ಯಾಂಕಿನ ಪ್ರಸಕ್ತ ಆಡಳಿತ ಮಂಡಳಿಗೆ ನೀಡಿದ ಬೆಂಬಲ, ಗ್ರಾಹಕರ ವಿಶ್ವಾಸ ಮತ್ತು ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ. ಜೊತೆಗೆ ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿರುತ್ತಾರೆ.-ಅನಿಲ್‌ ಲೋಬೋ, ಅಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌