ವಿಷಪೂರಿತ ಗಾಳಿಯಿಂದ ನೂರಾರು ವಿದ್ಯಾರ್ಥಿ, ಸಿಬ್ಬಂದಿಗೆ ಉಸಿರಾಟ ತೊಂದರೆ । ಪ್ರಾಂಶುಪಾಲರಿಂದ ಶಾಸಕರಿಗೆ ಪತ್ರ
ಕನ್ನಡಪ್ರಭ ವಾರ್ತೆ ಯಾದಗಿರಿ
‘ರಾಸಾಯನಿಕ ಹಾಗೂ ವೈದ್ಯಕೀಯ ಸಂಬಂಧಿ ಕಾರ್ಖಾನೆಗಳು ಹೊರಬಿಡುತ್ತಿರುವ ವಿಷಪೂರಿತ ಅನಿಲದಿಂದಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಉಸಿರಾಡಲು ತೊಂದರೆ ಆಗ್ತಿದೆ.. ದಯವಿಟ್ಟು, ಈ ಬಗ್ಗೆ ಕ್ರಮ ಕೈಗೊಳ್ಳಿ... "ಜಿಟಿಸಿಸಿ (ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರ) ಕೇಂದ್ರ ಸರ್ಕಾರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ಇದೇ ಫೆ.17 ರಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರಿಗೆ ಬರೆದಿದ್ದ ಇಂತಹುದ್ದೊಂದು ಪತ್ರ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಹದಗೆಟ್ಟ ಚಿತ್ರಣಕ್ಕೆ ಸರ್ಕಾರಿ ಅಧಿಕಾರಿಯೊಬ್ಬರ ನೇರ ಸಾಕ್ಷಿಯಂತಿತ್ತು. ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಷಪೂರಿತ ಅನಿಲ ಬಿಡುಗಡೆಯಾಗುತ್ತಿರುವ ಮಾಹಿತಿ ನೀಡುವ ಕುರಿತು ಪ್ರಾಂಶುಪಾಲ ಕಾಂಬ್ಳೆ ಶಾಸಕ ಕಂದಕೂರ ಅವರಿಗೆ ಪತ್ರ ಬರೆದಿದ್ದರು.
‘ಯಾದಗಿರಿ ನಗರದಿಂದ 45 ಕಿ.ಮೀ. ದೂರದಲ್ಲಿರುವ, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವು ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರದ ಸುತ್ತಲೂ ರಾಸಾಯನಿಕ ಹಾಗೂ ವೈದ್ಯಕೀಯಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.
ಇದರಿಂದ, ಕೆಲವು ವಿದ್ಯಾರ್ಥಿಗಳ ಪಾಲಕರು ದೂರವಾಣಿ ಮೂಲಕ ಹಾಗೂ ಖುದ್ದಾಗಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಇತ್ತೀಚೆಗೆ ನಡೆದ ವೃತ್ತಿ ಮಾರ್ಗದರ್ಶನ, ತಾಂತ್ರಿಕ ಕೌಶಲ್ಯ ಭೇಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ತಾಲೂಕಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ವಿಷಪೂರಿತ ಅನಿಲ ಬಗ್ಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಜೊತೆ ಚರ್ಚಿಸಿದ್ದಾರೆ.
ಅನಿವಾರ್ಯತೆಯ ಬದುಕು-ಶಿಕ್ಷಣ
ಪಾಠ ಹೇಳುವಾಗ ಶಿಕ್ಷಕರ, ಕೇಳುವಾಗ ಮಕ್ಕಳ ದುಸ್ಥಿತಿ ಆ ದೇವರೇ ಬಲ್ಲ! ಶಿಕ್ಷಣ ಹಾಗೂ ಮುಂದೆ ಉದ್ಯೋಗ ಸಿಗುವ ಭರವಸೆಯಿಂದಾಗಿ ಅಲ್ಲಿ ಶಿಕ್ಷಣ ಕಲಿಯಲು ಯಾದಗಿರಿ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಬಂದಿರುವ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು, ಅನಿವಾರ್ಯದ ಬದುಕು ಸಾಗಿಸಿದಂತಿತ್ತು.
‘ಕನ್ನಡಪ್ರಭ’ ಕೆಲವರ ಮಾತಿಗೆಳೆದಾಗ, ಹದಗೆಟ್ಟ ಪರಿಸರದ ಬಗ್ಗೆ ಹೆಚ್ಚಿನ ಮಾತನಾಡುವಂತಿಲ್ಲ ಎಂಬ ಅಘೋಷಿತ ಫರ್ಮಾನನ್ನು ಅಲ್ಲಿ ಹೊರಡಿಸಿದ್ದರಿಂದಲೇನೋ, ವಿದ್ಯಾರ್ಥಿಗಳ ಮೊಗದಲ್ಲಿನ ಮೌನವೇ ಅಲ್ಲಿ ಮಾತಾಡುತ್ತಿರುವಂತಿತ್ತು.
ಶರಣಗೌಡ ಕಂದಕೂರ, ಶಾಸಕ, ಗುರುಮಠಕಲ್ ಕ್ಷೇತ್ರ.