ಎಂಸಿಸಿ ಕಪ್ ಫುಟ್ಬಾಲ್: ಟೀಂ ಭಗವತಿ ಚಾಂಪಿಯನ್, ಸಂಗಂ ಎಫ್‌ಸಿ ರನ್ನರ್

KannadaprabhaNewsNetwork |  
Published : Jan 09, 2025, 12:46 AM IST
ಚಿತ್ರ : 8ಎಂಡಿಕೆ1 : ಟೀಂ ಭಗವತಿ ಚಾಂಪಿಯನ್ ಪಟ್ಟ ಅಲಂಕರಿಸಿತು.  | Kannada Prabha

ಸಾರಾಂಶ

ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಜಯಗಳಿಸಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಟೀಂ ಭಗವತಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸಂಗಂ ಎಫ್‌ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮ್ಯಾನ್ಸ್ ಕಾಂಪೌಂಡ್ ಕ್ಲಬ್(ಎಂಸಿಸಿ) ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಜಯಗಳಿಸಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಟೀಂ ಭಗವತಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸಂಗಂ ಎಫ್‌ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಗವತಿ ಹಾಗೂ ಸಂಗಂ ತಂಡಗಳ ನಡುವೆ ರೊಚಕ ಪಂದ್ಯಾಟ ನಡೆಯಿತು. ಉಭಯ ತಂಡಗಳು ಪೈಪೋಟಿಯೊಂದಿಗೆ ಸೆಣಸಾಟ ನಡೆಸಿದರೂ ಬಲಿಷ್ಠ ಭಗವತಿ ತಂಡ ಸಂಗಂ ತಂಡವನ್ನು ೫-೧ ಗೋಲುಗಳಿಂದ ಮಣಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.

ಸಂಜೆ ನಡೆದ ಅಂತಿಮ ಪಂದ್ಯಾವಳಿಯನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಎಂಸಿಸಿ ಅಧ್ಯಕ್ಷ ಎಂ.ಎ.ಕ್ರಿಸ್ಟೋಫರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಯಾಥೋಲಿಕ್ ಕ್ರಿಷ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಎಂಸಿಸಿ ಹಿರಿಯ ಆಟಗಾರ, ಭಾರತ ತಂಡದಲ್ಲಿ ಆಡಿದ ಬೆಪ್ಪುರನ ಅಣ್ಣಪ್ಪ, ಹಿರಿಯ ಆಟಗಾರರುಗಳಾದ ವಾಸು, ರವಿ, ರಾಜೇಶ್, ಪ್ರದೀಪ್, ಚಿಣ್ಣಪ್ಪ ಪಾಲಾಕ್ಷ, ಪೀಟರ್ ಬಹುಮಾನ ವಿತರಣೆ ಮಾಡಿದರು.

ವಿಜೇತರಿಗೆ ಶಾಸಕ ಡಾ. ಮಂತರ್ ಗೌಡ ಪ್ರಾಯೋಜಿಸಿದ್ದ ರು.೩೦ಸಾವಿರ ನಗದು ಹಾಗೂ ದಿ.ವಿಜಯಲಕ್ಷ್ಮಿ ಟಿ.ಕೆ ಅವರ ಜ್ಞಾಪಕಾರ್ಥ ಆರ್. ವೇಲಾಯುಧನ್ ಮತ್ತು ಸಂಸಾರದವರು ಪ್ರಯೋಜಿಸಿದ್ದ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಜಾನ್ಸನ್ ಪಿಂಟೋ ಪ್ರಾಯೋಜಿಸಿದ್ದ ರು.೨೦ಸಾವಿರ ನಗದು ಹಾಗೂ ಎಂಸಿಸಿಯ ಪದಾಧಿಕಾರಿ ಬೆಂಜಮಿನ್ ಪ್ರಶಾಂತ್ ದಿ.ಸೆಲೆಸ್ಟಿನ್ ಡಿಸೋಜ ಅವರ ಜ್ಞಾಪಕಾರ್ಥ ಪ್ರಾಯೊಜನೆ ಮಾಡಿದ್ದ ಟ್ರೋಫಿಯನ್ನು ವಿತರಣೆ ಮಾಡಲಾಯಿತು.

ದಿ. ಗೌರಮ್ಮ ಪೆರುಮಾಳ್ ಜ್ಞಾಪಕಾರ್ಥ ಮಡಿಕೇರಿ ಮುಡಾ ಸದಸ್ಯ ಆರ್.ಪಿ.. ಚಂದ್ರಶೇಖರ್ ಪ್ರಾಯೋಜಿಸಿದ್ದ ಉತ್ತಮ ತಂಡ ಬಹುಮಾನವನ್ನು ಅಮೇಟಿ ಎ ಗದ್ದೆಹಳ್ಳ ತಂಡ ಪಡೆದುಕೊಂಡರೆ, ದಿ. ಸುಶೀಲಮ್ಮ ಜ್ಞಾಪಕಾರ್ಥ ಎಂಸಿಸಿ ಕಾರ್ಯದರ್ಶಿ ಉಮೇಶ್‌ಕುಮಾರ್ ಪ್ರಾಯೋಜಿಸಿದ್ದ ಟಾಪ್ ಸ್ಕೋರರ್ ಬಹುಮಾನವನ್ನು ಅಮೇಟಿ ಬಿ ತಂಡದ ಮಸೂದ್ ಪಡೆದುಕೊಂಡರೆ, ದಿ.ಪಾಪು, ಎಲ್ಲಮ್ಮ ಜ್ಞಾಪಕಾರ್ಥ ಎಂಸಿಸಿ ಪದಾಧಿಕಾರಿ ಸುರ್ಜಿತ್ ಪ್ರಾಯೋಜನೆ ಮಾಡಿದ್ದ ಉತ್ತಮ ಆಟಗಾರ ಬಹುಮಾನವನ್ನು ಟೀಂ ಭಗವತಿ ತಂಡದ ರಂಗ ಪಡೆದುಕೊಂಡರು. ಎಂಸಿಸಿ ಪದಾಧಿಕಾರಿ ತೌಸೀಫ್ ಪ್ರಾಯೋಜನೆ ಮಾಡಿದ್ದ ಉತ್ತಮ ಗೋಲ್‌ಕೀಪರ್ ಬಹುಮಾನವನ್ನು ಟೀಂ ಭಗವತಿಯ ಕೆವಿನ್ ಪಡೆದುಕೊಂಡರೆ, ಎಂಸಿಸಿ ಕಾರ್ಯದರ್ಶಿ ಉಮೇಶ್‌ಕುಮಾರ್ ತಮ್ಮ ಪುತ್ರಿ ದಿ.ಶುದ್ಧಿ ಜ್ಞಾಪಕಾರ್ಥ ಪ್ರಾಯೋಜನೆ ಮಾಡಿದ್ದ ಉದಯೋನ್ಮುಖ ಆಟಗಾರ ಬಹುಮಾನವನ್ನು ಎಂಸಿಸಿ ತಂಡದ ರಾಶಿಕ್ ಪಡೆದುಕೊಂಡರು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡದ ಆಟಗಾರರಿಗೆ ವೈಯಕ್ತಿಕ ಬಹುಮಾನಗಳನ್ನು ಬೆಪ್ಪುರನ ಅಣ್ಣಪ್ಪ ಪ್ರಾಯೋಜನೆ ಮಾಡಿದ್ದರು.

ಕಾರ್ಯದರ್ಶಿ ಉಮೇಶ್ ಕುಮಾರ್, ಖಜಾಂಚಿ ಪ್ರಸನ್ನ, ಪದಾಧಿಕಾರಿಗಳಾದ ವಿವೇಕ್, ಸಚಿನ್ ವಾಸುದೇವ್, ಸೆಟ್ಟೆಜನ ಚಂದ್ರು, ಜಾಕ್, ಸುರ್ಜಿತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಸಮಾರೋಪ ಸಮಾರಂಭದಲ್ಲಿ ಎಂಸಿಸಿ ಕ್ಲಬ್ ಉಪಾಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಸದಸ್ಯ ಅಶೋಕ್ ಬಹುಮಾನ ವಿತರಣಾ ಕಾರ್ಯ ನೆರವೇರಿಸಿಕೊಟ್ಟರು. ಬೆಂಜಮಿನ್ ಪ್ರಶಾಂತ್ ವಂದಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್