ಮಂಗಳೂರು: ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಹೆಸರನ್ನು ಇದೀಗ ಪ್ಯಾರಾದೀಪ್ ಪಾಸ್ಫೇಟ್ಸ್ ಲಿಮಿಟೆಡ್ ಎಂಬುದಾಗಿ ಬದಲಾಯಿಸಿದ್ದು ಖಂಡನೀಯ. ಕೂಡಲೇ ಎಂಸಿಎಫ್ ಹೆಸರನ್ನೇ ಮರಳಿ ಇಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಸಿಎಫ್ ಹೆಸರನ್ನು ಮರು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೂಡಲೆ ಮಧ್ಯ ಪ್ರವೇಶ ಮಾಡಬೇಕು. ಇಲ್ಲದಿದ್ದರೆ ನಾನೇ ಖುದ್ದಾಗಿ ತೆರಳಿ ನಾಮಫಲಕವನ್ನು ತೆಗೆದು ಹಾಕಲಿದ್ದೇನೆ. ಅಲ್ಲದೆ ಈ ಕಾರ್ಖಾನೆಗೆ ನೀರು ಪೂರೈಕೆ ಮಾಡುವ ಬಗ್ಗೆಯೂ ಪರಿಶೀಲನೆ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರ ಜತೆ ಮಾತುಕತೆ ನಡೆಸಲಿದ್ದೇನೆ. ಮುಂದಿನ ಹಂತದಲ್ಲಿ ಉಪವಾಸ ಸತ್ಯಾಗ್ರಹದ ಉದ್ದೇಶ ಇದ್ದು, ಇದಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ಚರಿಸಿದರು.
1991ರಲ್ಲಿ ಎಂಸಿಎಫ್ ಆಡಳಿತವನ್ನು ಯುಬಿ ಕಂಪೆನಿಗೆ ನೀಡಲಾಗಿತ್ತು. 2015ರಲ್ಲಿ ಬಿರ್ಲಾ ಗ್ರೂಪ್ ಪಾಲಾಯಿತು. ಬಳಿಕ ಝುವಾರಿ, ಪಿಪಿಎಲ್ ಮತ್ತು ಎಂಸಿಎಫ್ ಒಡೆತನ ಪಡೆದಿದ್ದ ಅಡ್ವೆಂಝ್ಸ್ ಗ್ರೂಪ್ ಕಳೆದ ಅಕ್ಟೋಬರ್‌ನಲ್ಲಿ ಎರಡು ರಸಗೊಬ್ಬರ ಕಂಪೆನಿಗಳನ್ನು ಪ್ಯಾರಾದೀಪ್ ಪಾಸ್ಫೇಟ್ಸ್ ಜತೆ ವಿಲೀನಗೊಳಿಸಿದ ಬಳಿಕ ಎಂಸಿಎಫ್ ಹೆಸರು ಇತಿಹಾಸ ಸೇರಿದೆ. 1990ರಲ್ಲಿ ಇದ್ದ ಒಂದು ಸಾವಿರ ಕಾಯಂ ಸಿಬ್ಬಂದಿಗಳ ಸಂಖ್ಯೆ ಈಗ 450ಕ್ಕೆ ಕುಸಿದಿದೆ. ಸ್ಥಳೀಯ ಜನರಿಗೆ ಮೀಸಲಾಗಿದ್ದ ಉದ್ಯೋಗಗಳು ಈಗ ಹೊರ ಪ್ರದೇಶದವರ ಪಾಲಾಗುತ್ತಿವೆ ಎಂದು ಆರೋಪಿಸಿದರು.ಎಂಸಿಎಫ್‌ನ ಮಾಜಿ ಉದ್ಯೋಗಿಗಳಾದ ಮ್ಯಾಕ್ಸಿಮ್ ಆಲ್ಫ್ರೆಡ್ ಡಿಸೋಜ, ಮೊಹಮ್ಮದ್ ಅಲಿ, ಶಾಹಿಲ್ ಹಮೀದ್, ಎಂಸಿಎಫ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಕೆ ಇದ್ದರು.