ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳು ಸುಮಾರು ೫೦ ಲಕ್ಷ ರೂ ಮೌಲ್ಯದ ೮೦೬ ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತುವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಒಂದು ದ್ವಿ ಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಸ್ಪಿ ನಿಖಿಲ್.ಬಿ. ತಿಳಿಸಿದರು. ನಗರದ ಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾ.೧೨ ರಂದು ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ೭೫ರ ಮಡೇರಹಳ್ಳಿ ಬಳಿ ವಾಸವಾಗಿದ್ದ ಬೆಂಗಳೂರು ಮೂಲದ ಡ್ರಗ್ಸ್ ಪೆಡ್ಲರ್ ಸೈಯದ್ ವೂರ್ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಮಾದಕ ವಸ್ತು ಮಾರಾಟ
ಬೆಂಗಳೂರಿನಲ್ಲಿ ವಾಸವಿರುವ ನೈಜೀರಿಯಾ ಹಾಗೂ ಇತರೆ ದೇಶಗಳ ಮೂಲದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿ ಮಾಡಿಕೊಂಡು ಅವುಗಳನ್ನು ಸಣ್ಣ ಸಣ್ಣ ಪ್ಯಾಕೇಟ್‌ಗಳಾಗಿ ಮಾಡಿಕೊಂಡು ಕೋಲಾರದ ಕೈಗಾರಿಕಾ ಕಾರ್ಮಿಕರಿಗೆ ಮತ್ತು ಪ್ರಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಕೆ.ಟಿ.ಎಂ. ಡ್ಯೂಕ್ ದ್ವಿಚಕ್ರವಾಹನದಲ್ಲಿ ಆಗಮಿಸಿದ್ದ ಆರೋಪಿ ಸೈಯದ್ ಪುರ್ಖಾನ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಈಗ ಪತ್ತೆ ಹಚ್ಚಿರುವ ಎಂ.ಡಿ.ಎಂ.ಎ ಮಾದಕ ವಸ್ತುವಿನ ಮೌಲ್ಯವು ಸುಮಾರು ೫೦ ಲಕ್ಷಗಳೆದು ಅಂದಾಜು ಮಾಡಲಾಗಿದೆ. ಹಲವಾರು ತಿಂಗಳಿಂದ ನಮಗೆ ಕಾಲೇಜು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಬರುತ್ತಿತ್ತು. ಈ ಬಗ್ಗೆ ನಮ್ಮ ಸಿ.ಇ.ಎನ್. ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಪೊಲೀಸ್ ತಂಡಕ್ಕೆ ಬಹುಮಾನ
ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳ ನಿಖಿಲ್. ಬಿ. ಹೆಚ್ಚುವರಿ ಎ.ಎಸ್.ಪಿ.ಗಳಾದ ಸಿ.ಆರ್, ರವಿಶಂಕರ್, ಹಾಗೂ ಹೆಚ್.ಸಿ.ಜಗದೀಶ್ ಮಾರ್ಗದರ್ಶನದಲ್ಲಿ ಸಿ.ಇ.ಎನ್. ಪೊಲೀಸ್ ಠಾಣೆಯ ಪಿ.ಐ. ಎಸ್.ಆರ್.ಜಗದೀಶ್, ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಅಂಬರೀಶ್, ಶಿವಾನಂದ, ಆನಂದ್ ಕುಮಾರ್, ಅರುಣ್ ಕುಮಾರ್, ಅಲೀಫಾ, ಶಂಕರಪ್ಪ, ಸಂತೋಷ್, ಮಂಜುಳ, ಬಾಲಾಜಿ. ಪ್ರಸನ್ನ ಕುಮಾರ್, ನಫೀಜಾ ಖಾನ್ ಚಂದ್ರಿಕಾ ಜೆ.ಸಿ.ವಿನಯ್ ರವರ ತಂಡವು ಕಾರ್ಯಾಚರಣೆಯಲ್ಲಿ ಇದ್ದರು. ಎಸ್.ಪಿ. ನಿಖಿಲ್ ಶ್ಲಾಘಿಸಿ. ನಗದು ೧೦ ಸಾವಿರ ರು. ಬಹುಮಾನ ವಿತರಿಸಿದ್ದಾರೆ.